

ದಾವಣಗೆರೆ : ಕಾರಾಗೃಹದಲ್ಲಿದ್ದಾಗ ಪುಸ್ತಕಗಳ ಓದು ಮತ್ತು ಬರವಣಿಗೆಯ ಮೂಲಕ ಜ್ಞಾನ ಸಂಪಾದನೆಗೆ ಒತ್ತು ಕೊಟ್ಟಿದ್ದಾಗಿ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಚಿತ್ರದುರ್ಗ ಜೈಲಿನಿಂದ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಯಾಗಿ ನಗರಕ್ಕೆ ಆಗಮಿಸಿದ ಅವರು ಇಲ್ಲಿನ ಶಿವಯೋಗಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲ ಬಾರಿ ಜೈಲಿಗೆ ಹೋದಾಗ 250 ಪುಸ್ತಕಗಳನ್ನು ಓದಿದ್ದು, ಈ ಬಾರಿ 150 ಕೃತಿಗಳನ್ನು ಅಧ್ಯಯನ ಮಾಡಿ ಸಮಯದ ಸದುಪಯೋಗ ಮಾಡಿಕೊಂಡಿದ್ದಾಗಿ ತಿಳಿಸಿದರು. ಜತೆಗೆ 5 ಪುಸ್ತಕಗಳನ್ನೂ ಬರೆದಿದ್ದು ಅವುಗಳನ್ನು ಒಟ್ಟಿಗೇ ಬಿಡುಗಡೆಗೊಳಿಸುವುದಾಗಿ ಹೇಳಿದರು. ಶರಣರು, ಸ್ವಾಮಿಗಳು, ಸಂತರಿಗೆ ಸಹನೆಯೇ ಪ್ರಬಲ ಅಸ್ತ್ರವಾಗಿದೆ. ಅಖಂಡ ಸಹನೆಯಿಂದ ಎಂಥದೇ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದು, ದೊಡ್ಡ ಆಪತ್ತುಗಳನ್ನು ಸಹಿಸಿಕೊಳ್ಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾವು ಇಲ್ಲಿನ ಶಿವಯೋಗಾಶ್ರಮದಲ್ಲೇ ವಾಸ್ತವ್ಯ ಹೂಡಲಿದ್ದು ಭಕ್ತರು ಭೇಟಿಯಾಗಬಹುದು. ನಾವು ಇರುವುದೇ ಭಕ್ತರಿಗಾಗಿ. ಅವರಿಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದರು. ಶಿವಯೋಗಾಶ್ರಮ ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಹೂವಿನ ಹಾರ ಹಾಕಿ, ಸಿಹಿ ನೀಡಿ, ಪುಷ್ಪಾರ್ಚನೆಯೊಂದಿಗೆ ಶರಣರನ್ನು ಸ್ವಾಗತಿಸಿದರು. ಜಯದೇವ ಜಗದ್ಗುರುಗಳು ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಮೂರ್ತಿಗಳಿಗೆ ಸ್ವಾಮೀಜಿ ಪುಷ್ಪಾರ್ಚನೆ ಮಾಡಿದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ್, ಓಂಕಾರಪ್ಪ, ಬಾಡಾ ಆನಂದರಾಜ ಇತರರು ಇದ್ದರು.