ಸಂವಿಧಾನದ ಆಶಯ ಎತ್ತಿ ಹಿಡಿಯುವ ಕೆಲಸವಾಗಲಿ

JLR-ph-1-Nov-26-Samidana-Day.jpg
Published on

ಜಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಆಗಬೇಕಿದೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಚೇತನ್ ಹೇಳಿದರು.  ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಸಂವಿಧಾನಕ್ಕೆ ತೊಂದರೆಯಾದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಅಧಿಕಾರವಿದೆ. ಹಾಗೆಯೇ ತಮ್ಮ ಕರ್ತವ್ಯಗಳನ್ನು ಸಹ ಜವಾಬ್ದಾರಿಯಿಂದ ನಿಭಾಯಿಸಬೇಕು. ಆಗ ಮಾತ್ರ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯ ಎಂದರು.  ವಕೀಲರ ಸಂಘದ ತಾಲೂಕು ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ, ದೇಶದಲ್ಲಿ ಹಲವಾರು ಧರ್ಮಗಳಿವೆ. ಆಯಾ ಧರ್ಮಗಳಿಗೆ ಅವಮಾನವಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆದರೆ ನಮ್ಮ ಪವಿತ್ರ ಗ್ರಂಥ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದರೆ, ಸುಟ್ಟು ಹಾಕಿದರೆ ಯಾರೂ ಧ್ವನಿ ಎತ್ತುವುದಿಲ್ಲ. ಸಂವಿಧಾನ ಉಳಿದರೆ ಮಾತ್ರ ನಮ್ಮ ಉಳಿವು ಎಂದು ಹೇಳಿದರು.  ಸಂವಿಧಾನ ಬರುವ ಮುನ್ನ ಮತದಾನ ಮಾಡುವ ಹಕ್ಕು ಬಡವರಿಗೆ ಇರಲಿಲ್ಲ. ಜಮೀನ್ದಾರರು, ಆರ್ಥಿಕವಾಗಿ ಬಲ ಹೊಂದಿದವರಿಗೆ ಮಾತ್ರ ಅವಕಾಶವಿತ್ತು. ಶಿಕ್ಷಣದಲ್ಲೂ ತಾರತಮ್ಯವಿತ್ತು. ಮಹಿಳೆಯರಿಗೆ ಸ್ಥಾನಮಾನಗಳಿರಲಿಲ್ಲ. ಎಲ್ಲರಿಗೂ ಸಮಾನತೆ ಕಲ್ಪಿಸಿದ ಸಂವಿಧಾನವನ್ನು ಗೌರವಿಸಬೇಕು ಎಂದರು.  ಹಿರಿಯ ವಕೀಲ ಹನುಮಂತಪ್ಪ ಮಾತನಾಡಿ, ಇಂದಿಗೂ ಜಾತೀಯತೆ ನಿಂತಿಲ್ಲ. ದಲಿತರು ದೇವಸ್ಥಾನ ಪ್ರವೇಶಿಸುವಂತಿಲ್ಲ. ಸಂವಿಧಾನವನ್ನು ಪ್ರೀತಿ ಮಾಡಿ. ಅದು ಮಾನವೀಯ ಮೌಲ್ಯಗಳನ್ನು ಅಡಕ ಮಾಡಿರುವ ಗ್ರಂಥ ಎಂದು ತಿಳಿಸಿದರು.  ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜ ಮಾತನಾಡಿ, ರಾಜಕೀಯ ಪ್ರತಿನಿಧಿಗಳ ಆಡಳಿತಕ್ಕೆ ಅನುಗುಣವಾಗಿ ಸಂವಿಧಾನ ತಿದ್ದುಪಡಿಯಾಗಿದೆ. ಇಂತಹ ಸ್ವಾರ್ಥ ರಾಜಕಾರಣಿಗಳು ಅಗೌರವ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  ವಕೀಲರಾದ ಕರಿಬಸಯ್ಯ, ದೇಸಾಯಿ ಕುಮಾರ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಪರುಶುರಾಮ್, ರುದ್ರೇಶ್, ವಕೀಲರಾದ ಸಣ್ಣಓಬಯ್ಯ, ಪಂಪಾಪತಿ, ತಿಪ್ಪೇಸ್ವಾಮಿ, ಕಲ್ಲೇಶ್, ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net