

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವರ್ಷದ ಕೊನೆಯ ತಿಂಗಳಾಂತ್ಯಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಸುಗ್ಗಿಯೇ ಜರುಗುತ್ತಿದೆ. ವಿವಿಧೆಡೆ ಸೋಮವಾರದಿಂದ ಮಹೇಶ್ವರ ಜಾತ್ರೆ ಮೆರುಗು ಇದೆ. ಶ್ರೀ ವೀರಭದ್ರೇಶ್ವರ, ಬಸವೇಶ್ವರ, ಆಂಜನೇಯ ಸ್ವಾಮಿ ಹೀಗೆ ನಾನಾ ದೇವರುಗಳ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ನ್ಯಾಮತಿಯಲ್ಲಿ ಮಹೇಶ್ವರ ಜಾತ್ರೆ ಮೆರುಗು ಮಂಗಳವಾರವೂ ಮುಂದುವರಿದಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಧಾರ್ಮಿಕೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಸಂಭ್ರಮಿಸಿದರು.
ಸೊಕ್ಕೆಯಲ್ಲಿ ಶ್ರೀ ವೀರಭದ್ರೇಶ್ವರ ಕಾರ್ತಿಕ: ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಬುಧವಾರ ಬೆಳಗ್ಗೆ ಅಗ್ನಿಕುಂಡ ಹಾಯುವ ಕಾರ್ಯಕ್ರಮ ನೆರವೇರಿತು. ಮಂಗವಾರ ರಾತ್ರಿ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ದೀಪಗಳನ್ನು ಹಚ್ಚಿ ಬೆಳಗಿಸಲಾಯಿತು. ದೇವರ ಮೂರ್ತಿಗೆ ಹೂವಿನಲಂಕಾರ ಮಾಡಲಾಗಿತ್ತು. ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಊರ ಹೊರಗೆ ಕೊಂಡೊಯ್ದು ಹೊಳೆ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ ದೇಗುಲದ ಮುಂದೆ ನಿರ್ಮಿಸಿದ್ದ ಅಗ್ನಿ ಕುಂಡವನ್ನು ಭಕ್ತರು ಮತತು ಅರ್ಚಕರು ಪಲ್ಲಕ್ಕಿ ಹೊತ್ತುಕೊಂಡೇ ದಾಟಿದರು. ನೆರೆದಿದ್ದ ಭಕ್ತರು ದೇವರ ಸ್ಮರಿಸುತ್ತ ಕೆಂಡ ಹಾಯ್ದರು. ನಂತರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭಾವಿಕೇರಿ ಚಾಮುಂಡೇಶ್ವರಿ ಮಹಿಳಾ ವೀರಗಾಸೆ ಕಲಾ ತಂಡದವರು ವೀರಗಾಸೆ ನೃತ್ಯ ಪ್ರದರ್ಶಿಸಿದರು. ಗ್ರಾಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಿದ್ದರು.