ದೇವರ ಹೆಸರಲ್ಲಿ ಮದ್ಯ-ಮಾಂಸ ಸೇವನೆ ಸಲ್ಲ

BEERLINGESHWARA
Published on

ದಾವಣಗೆರೆ: ದೇವರ ಹೆಸರಲ್ಲಿ ಮದ್ಯ-ಮಾಂಸ ಸೇವಿಸುವ ಪರಿಪಾಠ ಭಕ್ತರಲ್ಲಿ ಬೇಡ ಎಂದು ವಿನೋಬ ನಗರ ಜಡೆಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಮನವಿ ಮಾಡಿದರು.

ಹೊಂಡದ ರಸ್ತೆಯ ಶ್ರೀ ಬೀರಲಿಂಗೇಶ್ವರ ಸ್ವಾಮಿ ನೂತನ ದೇವಸ್ಥಾನ ಪ್ರಾರಂಭೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಜಾತಿ ಭೇದದಿಂದಲೇ ದೇವರನ್ನು ಗುರುತಿಸುತ್ತಿರುವ ನಾವಿಂದು ನಮ್ಮ ನಾಲಿಗೆ ಚಪಲಕ್ಕಾಗಿ ಆತನ ಹೆಸರಿನಲ್ಲಿ ಮಾಂಸಾಹಾರ, ಮದ್ಯ ಸೇವನೆ ಮಾಡುತ್ತ ಭಗವಂತನ ಅಸ್ತಿತ್ವವನ್ನೇ ಕಳೆಯುತ್ತಿದ್ದೇವೆ. ನಿಜವಾದ ಪೂಜಾನುಷ್ಠಾನದ ಮೂಲಕ ಮಾಂಸಾಹಾರವನ್ನು ವರ್ಜಿಸಬೇಕು ಎಂದು ಹೇಳಿದರು.

ದೇವಸ್ಥಾನಕ್ಕೆ ಬರುವ ಭಕ್ತರನ್ನು ಅರ್ಚಕರು ಪ್ರೀತಿ-ವಿಶ್ವಾಸದಿಂದ ಕಂಡಲ್ಲಿ ಶಾಂತಿಯ ವಾತಾವರಣ ನೆಲೆಸುತ್ತದೆ. ಆಗ ಅವ್ಯಕ್ತ ಶಕ್ತಿ ಪ್ರಾಪ್ತವಾಗಲಿದೆ. ಅದನ್ನು ಧರ್ಮ ಎನ್ನಲಾಗುತ್ತದೆ. ಆದರೆ ಹಣಕ್ಕಾಗಿ ಪೂಜಿಸುವುದು, ನೊಂದು ಬಂದ ಭಕ್ತರನ್ನು ಮತ್ತಷ್ಟು ಭಯಪಡಿಸುವುದು ಅಧರ್ಮವಾಗಲಿದೆ ಎಂದರು.

ಧರ್ಮ ಕಾಯುವವನು ರಕ್ಷಣೆ ಪಡೆಯುತ್ತಾನೆ. ಧರ್ಮದ ಸಂಗ ಬೆಳೆಸಲು, ಧರ್ಮ ರಕ್ಷಣೆ ಮಾಡುವ ಉದ್ದೇಶದಿಂದಲೇ ಭಾರತೀಯ ಪರಂಪರೆಯ ಖುಷಿಮುನಿಗಳು ದೇವಸ್ಥಾನ, ಮಠ-ಮಂದಿರಗಳನ್ನು ಸ್ಥಾಪಿಸುತ್ತ ಬಂದಿದ್ದಾರೆ ಎಂದರು.

ನಮ್ಮ ಜೀವನದಲ್ಲಿ ದೇವರಿಗೆ ನೀಡುವಷ್ಟೇ ಮಹತ್ವವನ್ನು ಗುರುವಿಗೂ ನೀಡಬೇಕು. ಇಬ್ಬರೂ ಮಾನವ ಜೀವನವೆಂಬ ರೈಲಿಗೆ ಹಳಿ ಎಂದು ವಿಶ್ಲೇಷಿಸಿದರು. ಬೀರಲಿಂಗೇಶ್ವರ ಕೇವಲ ಕುರುಬರ ದೇವರಲ್ಲ. ಅವರು ವಿಶ್ವದ ಎಲ್ಲ ಜೀವಸಂಕುಲಕ್ಕೂ ದೇವರಾಗಿದ್ದಾರೆ ಎಂದರು.

ಹದಡಿ ಚಂದ್ರಗಿರಿ ಮಠದ ಶ್ರೀ ಪರಮಹಂಸ ಮುರಳೀಧರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಾವು ಕೆರೆಕಟ್ಟೆ, ದೇವಾಲಯಗಳನ್ನು ನಿರ್ಮಿಸುವ ಮೂಲಕ ಜನೋಪಯೋಗಿ ಕಾರ್ಯಗಳನ್ನು ಮಾಡಿ ಪುಣ್ಯದ ಬುತ್ತಿ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಜನರಿಂದು ಭೌತಿಕ ಸಂಪತ್ತು ಸಂಪಾದಿಸುವತ್ತ ಬೆನ್ನು ಹತ್ತಿದ್ದಾರೆ. ಆದರೆ ಅದು ನಮ್ಮ ಹಿಂದೆ ಬರುವುದಿಲ್ಲ. ಅದಕ್ಕೂ ಮಿಗಿಲಾದ ಜ್ಞಾನವನ್ನು ನಾವು ಸಂಪಾದಿಸುವ ಅಗತ್ಯವಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನೆ ನಿರ್ಮಾಣ, ಗೃಹಪ್ರವೇಶ ಇತರೆ ಶುಭ ಸಂದರ್ಭದಲ್ಲಿ ಕುರುಬ ಸಮಾಜಕ್ಕೆ ಮನ್ನಣೆ ಇದೆ ಎಂದರು.

ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, 130 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ದೈವ ನಂಬಿಕೆ ಉಳಿದಿದೆ. ಇದೇ ಕಾರಣಕ್ಕೆ ಕರೊನಾದಂತಹ ಕಾಯಿಲೆ ಬಂದಾಗಲೂ ಹೆಚ್ಚಿನ ಸಾವು ಸಂಭವಿಸಲಿಲ್ಲ ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಡಾ.ಉದಯಶಂಕರ್ ಒಡೆಯರ್, ಪ್ರಾಧ್ಯಾಪಕ ಡಾ.ಲೋಕೇಶ್ ಒಡೆಯರ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಆಶಾ ಉಮೇಶ್, ಕುರುಬ ಸಮಾಜದ ಮುಖಂಡ ಜೆ.ಕೆ, ಕೊಟ್ರಬಸಪ್ಪ, ಕರಿಸಿದ್ದಪ್ಳ ಸ್ವಾಮಿ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಶಾಂತಿ ಹೋಮ, ರುದ್ರ ಹೋಮ, ಮಹಾ ಪೂರ್ಣಾಹುತಿ ನೆರವೇರಿತು. ಕಾಗಿನೆಲೆ ಶ್ರೀ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಭಾಗವಹಿಸಿದ್ದರು.

ಭಾರತ ಧರ್ಮಾಚರಣೆಯಿಂದಾಗಿ ವಿಶ್ವ ಗುರುವಾಗಿದೆ. ಇತ್ತೀಚೆಗೆ ವ್ಯವಹಾರಿಕ ಒತ್ತಡಗಳು ಹಾಗೂ ಸಂಸಾರದ ಜಂಜಡದಿಂದಾಗಿ ಮಾನವರು ಸಮಾಜದ ಋಣ ತೀರಿಸುವುದು ಕಷ್ಟವಾಗಿದೆ. ಇದರ ನಡುವೆ ಸಮಿತಿಯವರು ದೇಣಿಗೆ ಸಂಗ್ರಹಿಸಿ ದೇವಸ್ಥಾನ ನಿರ್ಮಿಸಿರುವುದು ಪುಣ್ಯದ ಕೆಲಸ. ಎಸ್.ಟಿ.ವೀರೇಶ್, ಮಾಜಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net