

ದಾವಣಗೆರೆ : ಜಿಲ್ಲೆಗೆ ಐಟಿ, ಬಿಟಿ ಕಂಪನಿಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬ್ರಾೃಂಡ್ ದಾವಣಗೆರೆ’ ಮಾಡುವ ಮೂಲಕ ಜಿಲ್ಲೆಯಲ್ಲಿರುವ ಮೂಲಸೌಲಭ್ಯ ಮತ್ತು ಅವಕಾಶಗಳ ಬಗ್ಗೆ ಉದ್ಯಮ ವಲಯದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಎಸ್.ಟಿ.ಪಿ.ಐ ಕೇಂದ್ರ ಇದೆ. 6-8 ಕಂಪನಿಗಳ 60 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅದರ ಸ್ವಂತ ಕಟ್ಟಡಕ್ಕಾಗಿ ಎರಡು ಎಕರೆ ಭೂಮಿ ಕೇಳಿದ್ದಾರೆ. ಹತ್ತು ಎಕರೆ ಭೂಮಿ ನೀಡಲು ಸಿದ್ಧ ಇದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯ ಕಟ್ಟಡ ಬಳಕೆ ಮಾಡಿಕೊಳ್ಳಲೂ ಅವಕಾಶವಿದೆ ಎಂದರು. ಐಟಿ, ಬಿಟಿ ಕಂಪನಿಗೆ 10 ರಿಂದ 30 ಎಕರೆ ಭೂಮಿಗೆ ಹುಡುಕಾಟ ನಡೆದಿದೆ. ಬಹಳ ಹಿಂದೆಯೇ ಇಲ್ಲಿ ವಿಮಾನ ನಿಲ್ದಾಣ ಆಗಬೇಕಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐಟಿ ಉದ್ಯಮಗಳನ್ನು ವಿಸ್ತರಿಸಲಾಗುತ್ತಿದೆ. ಅದರಂತೆ ಕರ್ನಾಟಕ ಡಿಜಿಟಲ್ ಟೆಕ್ನಾಲಜಿ ಮಿಷನ್‌ನವರೊಂದಿಗೆ ಮಾತುಕತೆ ಆಗಿದೆ. ಸದ್ಯದಲ್ಲೇ ಆ ತಂಡ ಇಲ್ಲಿಗೆ ಭೇಟಿ ನೀಡಲಿದೆ ಎಂದರು. ಮುಂಬರುವ ದಿನಗಳಲ್ಲಿ ದಾವಣಗೆರೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಕ್ರಮವೊಂದನ್ನು ಆಯೋಜಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.