

ರಮೇಶ ಜಹಗೀರದಾರ್ ದಾವಣಗೆರೆ
ಬಾಂಬ್ ಬೀಳುವ ಮುನ್ಸೂಚನೆ ಇದ್ದಾಗ ಸೈರನ್ ಸದ್ದು ಕೇಳಿಸುತ್ತದೆ. ಆಗ ತಕ್ಷಣ ಮನೆಯಿಂದ ಹೊರಗೆ ಬಂದು ನಿಲ್ಲುತ್ತೇನೆ. ಏರ್ ಸ್ಟ್ರೈಕ್ ಆದಾಗ ಹೊಗೆ ಕಾಣಿಸುತ್ತದೆ. ಸ್ವಲ್ಪ ಆತಂಕ ಇದ್ದೇ ಇರುತ್ತದೆ, ಆದರೆ ನಾನಿರುವ ಪ್ರದೇಶ ಸುರಕ್ಷಿತವಾಗೇ ಇದೆ.
ಇಸ್ರೇಲ್‌ನಲ್ಲಿ 4 ವರ್ಷಗಳಿಂದ ‘ಕೇರ್ ಗಿವರ್’ ಕೆಲಸ ಮಾಡುತ್ತಿರುವ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ದೊಣ್ಣೆಹಳ್ಳಿಯ ಪ್ರಿಯದರ್ಶಿನಿ, ವಿಜಯವಾಣಿಯೊಂದಿಗೆ ದೂರವಾಣಿ ಮೂಲಕ ಹಂಚಿಕೊಂಡ ಅನಿಸಿಕೆಯಿದು.
ಯುದ್ಧಪೀಡಿತ ಇಸ್ರೇಲ್‌ನ ಮಧ್ಯ ಭಾಗದಲ್ಲಿರುವ (ಸೆಕೆಂಡ್ ಏರಿಯಾ) ರಿಶಾನ್ ಲೀಸಿಯಾನ್ ಎಂಬ ಊರಿನಲ್ಲಿ ಅವರು ವೃದ್ಧ ದಂಪತಿಯ ಕೇರ್ ಗಿವರ್ ಆಗಿದ್ದಾರೆ. ಗಡಿ ಭಾಗದ ಪ್ರದೇಶಗಳಲ್ಲಿ ಹೆಚ್ಚು ಅಪಾಯವಿದೆಯಂತೆ, ಇವರು ವಾಸಿಸುವ ಕಡೆ ಅಷ್ಟೊಂದು ಸಮಸ್ಯೆ ಇಲ್ಲ. ಆದರೂ ಆಗಾಗ ಆತಂಕದ ಕ್ಷಣಗಳನ್ನು ಎದುರಿಸುತ್ತಲೇ ಇದ್ದಾರೆ.
ಒಂದು ಬಾರಿ ಇವರಿರುವ ಪ್ರದೇಶದಲ್ಲೇ ಬಾಂಬ್ ಬೀಳುವ ಸಾಧ್ಯತೆ ಇತ್ತಂತೆ, ಇಸ್ರೇಲ್ ಸೇನಾ ಪಡೆಗಳು ಏರ್ ಸ್ಟ್ರೈಕ್ ಮೂಲಕ ಅದನ್ನು ಎದುರಿಸಿದ್ದರಿಂದ ಯಾವುದೇ ಅಪಾಯವಾಗಲಿಲ್ಲ. ಕಳೆದ 3 ದಿನಗಳಿಂದ ಅಂಥ ಆತಂಕವೇನೂ ಇಲ್ಲ ಎಂದರು.
ಇಸ್ರೇಲ್‌ನಲ್ಲಿ ಸಾಮಾನ್ಯವಾಗಿ ಎಲ್ಲ ಮನೆಗಳಿಗೂ ಬಂಕರ್ ಇರುತ್ತವೆ. ಆದರೆ ಪ್ರಿಯದರ್ಶಿನಿ ಇರುವ ಮನೆ ಹಳೆಯದಾಗಿದ್ದು ಬಂಕರ್ ಕೊಠಡಿ ಇಲ್ಲವಂತೆ. ಹಾಗಾಗಿ ಅಪಾಯದ ಸಂದರ್ಭ ಎದುರಾದರೆ ಮನೆಯಿಂದ ಹೊರಗೆ ಓಡಿ ಬರಬೇಕು. 30 ವರ್ಷ ಅಲ್ಲಿನ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಯೊಬ್ಬರು ಅಲ್ಲೀಗ ವೃದ್ಧಾಪ್ಯ ಜೀವನ ಸಾಗಿಸುತ್ತಿದ್ದಾರೆ. ಪ್ರಿಯದರ್ಶಿನಿ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ.
‘ಯುದ್ಧ ಎಷ್ಟೇ ದಿನ ನಡೆದರೂ ಅಂತಿಮವಾಗಿ ಗೆಲ್ಲುವುದು ಇಸ್ರೇಲ್. ಆ ವಿಶ್ವಾಸ ನಮಗಿದೆ. ಈ ದೇಶದ ಜನರು ಶಾಂತಿ ಪ್ರಿಯರಾಗಿದ್ದು ಮಾನವೀಯತೆ ಇದೆ. ಸುರಕ್ಷತೆ ಇದೆ. ಆರೋಗ್ಯ ಸಮಸ್ಯೆಯಾದರೆ ವೈದ್ಯಕೀಯ ವಿಮೆ ಸೌಲಭ್ಯವಿದೆ’ ಎಂದು ಆ ದೇಶದ ಬಗ್ಗೆ ಪ್ರಿಯದರ್ಶಿನಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಈಗ ಭಾರತಕ್ಕೆ ಮರಳುವ ಆಲೋಚನೆ ಇಲ್ಲ. ಇಸ್ರೇಲ್‌ನ ಶಕ್ತಿಯ ಬಗ್ಗೆ ನಂಬಿಕೆ ಇದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಪ್ರಿಯದರ್ಶಿನಿ ಶಿವಮೊಗ್ಗ ಮತ್ತು ಉಡುಪಿಯಲ್ಲಿ ನರ್ಸಿಂಗ್ ಕೋರ್ಸ್ ಮಾಡಿದ್ದಾರೆ. ದೊಣ್ಣೆಹಳ್ಳಿ ಗ್ರಾಮದಲ್ಲಿ ಅವರ ತಾಯಿ ಮತ್ತು ಸಹೋದರಿಯರಿದ್ದಾರೆ.