

ದಾವಣಗೆರೆ : ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ, ಮಕ್ಕಳಿಗೆ ಗುಲಾಬಿ ಹೂವು ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಮುಖಂಡ ಕೆ.ಎಲ್. ಹರೀಶ್ ಬಸಾಪುರ, ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು. ಸರ್ಕಾರಿ ಶಾಲೆಯ ಮಕ್ಕಳು ಈ ಬಾರಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಅವರಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.
ಕಳೆದ ವರ್ಷ ತಾವು ಮಕ್ಕಳಿಗೆ ನೀಡಿದ ಮಾತಿನಂತೆ ಶೇ. ನೂರರಷ್ಟು ಹಾಜರಾತಿ ಪಡೆದ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ನೀಡುವುದಾಗಿ ಹಾಗೂ ಈ ವರ್ಷ ಅಂಥ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಗುರುಸಿದ್ದಯ್ಯ, ಉಪಾಧ್ಯಕ್ಷೆ ಮಂಜುಳಾ, ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಹಾಗೂ ಶಿಕ್ಷಕರು ಇದ್ದರು.