ಸ್ವಾತಂತ್ರೃ ಪಡೆಯಲು ‘ಕ್ವಿಟ್ ಇಂಡಿಯಾ’ ಅಡಿಪಾಯ

freedom.jpg
Published on

ದಾವಣಗೆರೆ : ದೇಶಕ್ಕೆ 1947ರ ಆ. 15 ರಂದು ಸ್ವಾತಂತ್ರ್ಯ ಸಿಗುವುದಕ್ಕೆ 1942ರ ಆ. 9 ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿ ಅಡಿಪಾಯವಾಯಿತು ಎಂದು ನಿವೃತ್ತ ಯೋಧ ಎಂ. ಅಶೋಕ್ ಅಭಿಪ್ರಾಯಪಟ್ಟರು.
 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹುತಾತ್ಮರಾದ ದಾವಣಗೆರೆ ಜಿಲ್ಲೆಯ 6 ಜನ ಹೋರಾಟಗಾರರ ಸ್ಮರಣೆಯಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಸ್ಮಾರಕದ ಬಳಿ ಬುಧವಾರ ನಡೆದ ಬಲಿದಾನ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
 ಈ ಹೋರಾಟದಲ್ಲಿ ದೇಶಾದ್ಯಂತ ಲಕ್ಷಾಂತರ ಜನರು ಪಾಲ್ಗೊಂಡು, ಸಾವಿರಾರು ಮಂದಿಯ ಬಲಿದಾನವಾಯಿತು. ಈ ಇತಿಹಾಸವನ್ನು ಅರಿತು, ದೇಶದ ಸ್ವಾತಂತ್ರ್ಯವನ್ನು ನಾವೆಲ್ಲ ಉಳಿಸಿಕೊಳ್ಳಬೇಕಿದೆ ಎಂದರು.
 ಸ್ವಹಿತದ ಜತೆಗೆ ಸಾಮಾಜಿಕ ಹಿತ, ಸಮಷ್ಟಿಯ ಹಿತ ಮತ್ತು ರಾಷ್ಟ್ರದ ಹಿತವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
 ಜಗತ್ತಿನಲ್ಲಿ ಭಾರತದ ಸೈನ್ಯ ಅತ್ಯಂತ ಬಲಿಷ್ಠವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಫಲವಾಗಿ ಅತ್ಯಾಧುನಿಕ ಕ್ಷಿಪಣಿಗಳು ನಮ್ಮಲ್ಲಿವೆ. ಹೀಗಿರುವಾಗ ದೇಶದೊಳಗೆ ಶಾಂತಿ ನೆಲೆಸಲು ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
 ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನದ ಬಗ್ಗೆ ಮನೆ ಮನೆಗೆ ತಿಳಿಸುವ ಕೆಲಸ ಆಗಬೇಕು ಎಂದರು.
 ಹೋರಾಟದ ವೇಳೆ ಬ್ರಿಟಿಷರ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು, ರೈಲು ಕಂಬಿಗಳನ್ನು ಕೀಳಲಾಯಿತು. ದಾವಣಗೆರೆಯಲ್ಲೂ ಅಂಥದೇ ಚಳವಳಿ ನಡೆದು, ವೀರ ಸ್ವಾತಂತ್ರೃ ಯೋಧರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗಾನಹಳ್ಳಿ ಹನುಮಂತಪ್ಪ ಗುಂಡಿಗೆ ಎದೆಯೊಡ್ಡಿ ಪ್ರಾಣಾರ್ಪಣೆ ಮಾಡಿದರು ಎಂದು ಸ್ಮರಿಸಿದರು.
 ಕ್ವಿಟ್ ಇಂಡಿಯಾ ಚಳವಳಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಬ್ರಿಟೀಷ್ ಆಡಳಿತದ ವಿರುದ್ಧ ಜನರು ದಂಗೆ ಎದ್ದಿದ್ದರು. ಅವರ ತ್ಯಾಗ, ಪರಿಶ್ರಮ ಮರೆಯುವಂತಿಲ್ಲ. ಸ್ವಾತಂತ್ರೃ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆಯೂ ಅಪಾರವಾಗಿದೆ ಎಂದು ತಿಳಿಸಿದರು.
 ಬಿಜೆಪಿ ಯುವ ಮುಖಂಡ ಎನ್. ರಾಜಶೇಖರ್ ಮಾತನಾಡಿ, ಇತಿಹಾಸ ತಿಳಿಯದೇ ಚರಿತ್ರೆಯ ನಿರ್ಮಾಣ ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಕೇವಲ ಸತ್ಯ, ಅಹಿಂಸೆಯಿಂದಾಗಿ ಸ್ವಾತಂತ್ರೃ ದೊರಕಿಲ್ಲ, ಹಲವು ಕ್ರಾಂತಿಕಾರಿ ಹೋರಾಟಗಾರರ ಕೊಡುಗೆಯೂ ಅಪಾರವಾಗಿದೆ. ಬಹಳಷ್ಟು ಜನರು ಜೈಲು ವಾಸ ಅನುಭವಿಸಿದರು. ಈ ವೀರ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.
 ಇದೇ ವೇಳೆ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಿವೃತ್ತ ಯೋಧರಾದ ಶಶಿಕಾಂತ್, ಕುಮಾರ್, ಮಹಾಲಿಂಗನಗೌಡ ಪಾಟೀಲ್ ಅವರನ್ನೂ ಗೌರವಿಸಲಾಯಿತು.
 ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಜೀವನಮೂರ್ತಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಮಹಾನಗರ ಪಾಲಿಕೆಯ ಉಪ ಮೇಯರ್ ಯಶೋದಾ, ಸದಸ್ಯರಾದ ಸೋಗಿ ಶಾಂತಕುಮಾರ್, ಕೆ.ಎಂ. ವೀರೇಶ್, ರಾಕೇಶ ಜಾಧವ್, ಗೋಣೆಪ್ಪ, ಪಕ್ಷದ ಮುಖಂಡರಾದ ಭಾಗ್ಯಮ್ಮ, ಪಿ.ಸಿ. ಶ್ರೀನಿವಾಸ್, ಶಿವನಗೌಡ ಪಾಟೀಲ್, ಶ್ಯಾಮ್, ರಮೇಶ ನಾಯ್ಕ, ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net