

ರಮೇಶ ಜಹಗೀರದಾರ್, ದಾವಣಗೆರೆ
ಈ ಬಾರಿಯ ಸ್ವಾತಂತ್ರೊೃೀತ್ಸವವನ್ನು ಸಂಭ್ರಮೋತ್ಸವವಾಗಿಸಿ, ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ಕಳೆದ ಒಂದು ವಾರದಿಂದ ಜಿಲ್ಲೆಯ ಗ್ರಾ.ಪಂ. ಗ್ರಂಥಾಲಯಗಳಲ್ಲಿ ಮಕ್ಕಳೇ ತ್ರಿವರ್ಣ ಧ್ವಜ, ಬ್ಯಾಡ್ಜ್‌ಗಳನ್ನು ತಯಾರಿಸುವ ಮೂಲಕ ಅವುಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಸ್ವಾತಂತ್ರೃ ಚಳವಳಿಯ ಮಹತ್ವವನ್ನು ಅವರಿಗೆ ಪರಿಚಯಿಸಲಾಗುತ್ತಿದೆ. ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನದ ಕತೆಯನ್ನು ವಿವರಿಸಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಬಿತ್ತಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಗ್ರಂಥಾಲಯಕ್ಕೆ ಬರುವ ಮಕ್ಕಳು ಬಣ್ಣ ಮತ್ತು ಕಾಗದಗಳನ್ನು ಬಳಸಿಕೊಂಡು ತ್ರಿವರ್ಣ ಧ್ವಜ ಹಾಗೂ ಬ್ಯಾಡ್ಜ್‌ಗಳನ್ನು ತಯಾರಿಸುತ್ತಿದ್ದಾರೆ. ಆ ಬ್ಯಾಡ್ಜ್‌ಗಳನ್ನು ಮಕ್ಕಳು ಆ. 15ರಂದು ತಮ್ಮ ಶಾಲೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಧರಿಸಲಿದ್ದಾರೆ.
ಸಂವಿಧಾನದ ಮೂಲ ಆಶಯಗಳ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸಲು ಸ್ವಾತಂತ್ರೊೃೀತ್ಸವದಂದು ಸಂವಿಧಾನದ ಪೀಠಿಕೆಯನ್ನು ಮಕ್ಕಳು ಸಾಮೂಹಿಕವಾಗಿ ಓದಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಂವಿಧಾನದ ಪೀಠಿಕೆಯನ್ನು ಮಕ್ಕಳಿಂದ ಬರೆಸಿ ಅದರ ಸುತ್ತಲೂ ವಿವಿಧ ಬಣ್ಣಗಳಿಂದ ಸುಂದರ ಚೌಕಟ್ಟನ್ನು ರಚಿಸಿ, ಅವರು ತಮ್ಮ ಮನೆಯಲ್ಲಿ ಅದನ್ನು ಪ್ರದರ್ಶಿಸುವಂತೆ ಹೇಳಲಾಗುತ್ತಿದೆ.
ಗ್ರಂಥಾಲಯ ಮೇಲ್ವಿಚಾರಕರು ಸ್ವಾತಂತ್ರೃ ದಿನದ ಹಾಡುಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಲು ಮಕ್ಕಳನ್ನು ಒಟ್ಟುಗೂಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮಕ್ಕಳು ಕಲಿತ ಹಾಡನ್ನು ಸ್ವಾತಂತ್ರೊೃೀತ್ಸವದಂದು ಅವರ ಶಾಲೆ ಅಥವಾ ಗ್ರಂಥಾಲಯದಲ್ಲಿ ಹಾಡಬಹುದು. ಇದರಿಂದ ಅವರ ಪಾಲ್ಗೊಳ್ಳುವಿಕೆ ಸಾಧ್ಯವಾಗಲಿದೆ. ಮಕ್ಕಳು ಹಾಡುವುದನ್ನು ವಿಡಿಯೋ ಮಾಡುವಂತೆಯೂ ಸೂಚನೆ ನೀಡಲಾಗಿದೆ. ಒಟ್ಟಾರೆ ಈ ಚಟುವಟಿಕೆಯು ಚಿಣ್ಣರಲ್ಲಿ ವಿಶ್ವಾಸ ಮತ್ತು ದೇಶಭಕ್ತಿಯನ್ನು ಮೂಡಿಸುತ್ತದೆ ಎನ್ನುವ ಚಿಂತನೆಯಿದೆ.
ರಾಜ್ಯದ ಸ್ವಾತಂತ್ರೃ ಹೋರಾಟಗಾರರ ಬಗ್ಗೆ ಸ್ಥಳೀಯ ಹಿರಿಯರು, ಶಿಕ್ಷಕರ ಮೂಲಕ ಮಕ್ಕಳಿಗೆ ಪರಿಚಯಿಸಬೇಕು. ಅವರ ವ್ಯಕ್ತಿತ್ವವನ್ನು ವಿವರಿಸಿ, ಇತ್ತಮ ನಾಗರಿಕರಾಗಿ ದೇಶಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ತಿಳಿಸಿ ಪ್ರೇರೇಪಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ.
ತಿಂಗಳಿಡೀ ನಡೆಯುವ ಸ್ವಾತಂತ್ರೃ ಸಂಭ್ರಮದ ಭಾಗವಾಗಿ ದೇಶಭಕ್ತಿಯನ್ನು ಮೂಡಿಸುವ ಚಲನಚಿತ್ರಗಳ ಪ್ರದರ್ಶನ ಮಾಡಲು ಗ್ರಂಥಾಲಯ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ.
ಸ್ವಾತಂತ್ರೃ ಹೋರಾಟ ಮತ್ತು ಸ್ವತಂತ್ರ ಭಾರತವನ್ನು ಮಕ್ಕಳು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯಲು ಚರ್ಚೆಗಳನ್ನು ನಡೆಸುವ ಉದ್ದೇಶವೂ ಇದೆ.
...
(ಕೋಟ್)
ಜಿಲ್ಲೆಯ ಗ್ರಾ.ಪಂ. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ತ್ರಿವರ್ಣ ಧ್ವಜ, ಬ್ಯಾಡ್ಜ್ ತಯಾರಿಕೆಯಂಥ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಪ್ರಯತ್ನ ಇದಾಗಿದೆ. ಸ್ವಾತಂತ್ರೊೃೀತ್ಸವದ ಸಂಭ್ರಮವನ್ನು ಈ ರೀತಿಯಾಗಿ ಆಚರಿಸಲಾಗುತ್ತಿದೆ.
ಸುರೇಶ ಇಟ್ನಾಳ್, ಜಿ.ಪಂ. ಸಿಇಒ