ಸತ್ಯದರ್ಶನ ಮಾಡಿಸಿದ ವಚನಗಳು

dvg rathotsava july 27
Published on

ದಾವಣಗೆರೆ: ಬದುಕಿನ ಪರಿವರ್ತನೆಗೆ ಸಿದ್ಧರಾಮರ ಜೀವನ ದರ್ಪಣವಿದ್ದಂತೆ ಎಂದು ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರು ಪೀಠದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧರಾಮೇಶ್ವರ ಕಿರು ರಥೋತ್ಸವದ ನೇತೃತ್ವವಹಿಸಿ ಮಾತನಾಡಿದರು.

ಸಿದ್ಧರಾಮೇಶ್ವರರು ಮೌಢ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವತ್ಮಾರಿಗೆ ಲೇಸು ಬಯಸಿದವರು ಎಂದು ವಿಶ್ಲೇಷಿಸಿದರು.

ಸಿದ್ಧರಾಮರ ವಚನಗಳು ಸಮಾಜದ ವ್ಯವಸ್ಥೆಯ ಗೊಡ್ಡುತನವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ ಎಂದರು.

ಸಮಾಜ ವ್ಯವಸ್ಥೆಯಲ್ಲಿ ಬೇರೂರಿದ ಮೌಢ್ಯ, ಅಂಧಾನುಕರಣೆಗಳು ಮತ್ತು ಅವುಗಳನ್ನೆಲ್ಲಾ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸೋಗನ್ನೂ ವಚನಗಳು ಬಯಲು ಮಾಡುತ್ತಾ ವಾಸ್ತವ ಬದುಕಿನ ಸತ್ಯದರ್ಶನವನ್ನೂ ತೋರಿಸಿರುವುದರಿಂದ ವಚನ ಸಾಹಿತ್ಯದ ಅನಿವಾರ್ಯತೆಯ ಅರಿವೂ ಮೂಡುತ್ತದೆ ಎಂದು ತಿಳಿಸಿದರು.

ಜೀವ ಚೈತನ್ಯ ದೇಹವೆಂಬ ರಥದ ಆಯಸ್ಸು ಹೆಚ್ಚಿಸಲು, ಸಾಂಪ್ರದಾಯಿಕ ರಥೋತ್ಸವವನ್ನು ರದ್ದುಗೊಳಿಸಿದೆ. ಪ್ರಸಾದ ಕಾಯವ ಕೆಡಿಸಲಾಗದು ಎಂಬ ಶರಣವಾಣಿಯಂತೆ ಕರೊನಾ ಸಾಂಕ್ರಾಮಿಕ ಕಾಲದಲ್ಲಿ ಎಚ್ಚರಿಕೆಯ ನಡೆಯನ್ನು ಪಾಲಿಸಿ ಮುಂದಿನ ನೂರಾರು ರಥೋತ್ಸವ ಕಣ್ತುಂಬಿಕೊಳ್ಳಲು ಸಾಂಕೇತಿಕ ಕಿರು ರಥೋತ್ಸವ ಆಚರಿಸಲಾಗಿದೆ ಎಂದು ಹೇಳಿದರು.

ವಿರಕ್ತ ಮಠದ ಬಸವಪ್ರಭು ಶ್ರೀಗಳು ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರರು ನೀಡಿದ ತತ್ವಗಳು ಒಂದು ಜನಾಂಗಕ್ಕೆ ಸೀಮಿತವಲ್ಲ ಇಡೀ ಮಾನವಕುಲಕ್ಕೆ ಬೇಕಾಗಿದೆ ಎಂದರು.

ಕರೊನಾ ಸಂದರ್ಭದಲ್ಲಿ ಶ್ರೀಗಳು ಒಂದು ತಿಂಗಳ ಕಾಲ ನಿತ್ಯವೂ ಸರ್ವ ಜನಾಂಗದ ಸಾವಿರಾರು ಜನರಿಗೆ ದಿನಸಿ ಕಿಟ್‌ಗಳನ್ನು ಹಂಚಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಭೋವಿ ಸಮಾಜದ ಕಾರ್ಯಾಧ್ಯಕ್ಷ ಎಚ್.ಜಯಣ್ಣ, ಮುಖಂಡರಾದ ವಿ.ಗೋಪಾಲ್, ಮೂರ್ತಿ, ಮೇಸ್ತ್ರಿ ನಾರಾಯಣ, ಪಾಲಿಕೆ ಮಾಜಿ ಸದಸ್ಯ ಆರ್.ಶ್ರೀನಿವಾಸ, ಇಂಜಿನಿಯರ್ ವೆಂಕಟೇಶ, ಎಚ್.ಚಂದ್ರಪ್ಪ, ಎಚ್.ಚಾಮರಾಜ್, ಬಿ.ಟಿ.ರಾಜು, ಶಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net