

ದಾವಣಗೆರೆ : ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಬೇರೊಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ, ಗೌರವದಿಂದ ಬದುಕಿದರೆ ಮಾನವ ಹಕ್ಕುಗಳನ್ನು ಪಾಲಿಸಿದಂತೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವ ಕುಲದ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಮಾನವ ಹಕ್ಕು ಮುನ್ನೆಲೆಗೆ ಬಂದಿದೆ. ಪ್ರಾಚೀನ ಕಾಲದಿಂದಲೂ ಮಾನವ ಹಕ್ಕು ಪ್ರತಿಪಾದನೆ ಮಾಡಲಾಗಿದೆ ಎಂದರು. ಧರ್ಮ, ಜಾತೀಯತೆ ಹೆಸರಿನಲ್ಲಿ ಕೂಡ ಇದು ಉಲ್ಲಂಘನೆ ಆಗುತ್ತಿದೆ. ದೇಗುಲ ನಿರ್ಬಂಧ, ಅಂತರ್ಜಾತಿ ಮದುವೆಗೆ ಅಡ್ಡಿ ಸೇರಿ ಹಲವು ವಿಧದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚು ಕಾಣಿಸುತ್ತದೆ ಎಂದು ಹೇಳಿದರು. ಜಾತಿ, ಧರ್ಮ, ಲಿಂಗ ಹಾಗೂ ಆರ್ಥಿಕ ಸ್ಥಿತಿ ಆಧಾರದ ಮೇರೆಗೆ ತಾರತಮ್ಯ ಮಾಡಬಾರದು. ಎಲ್ಲರಿಗೂ ಸಮಾತೆಯಿಂದ ಬದುಕುವ ಹಕ್ಕು ಇದೆ. ಪ್ರತಿಯೊಬ್ಬರೂ ಮಾನವೀಯತೆ ಬೆಳೆಸಿಕೊಳ್ಳಬೇಕು. ದೀನ ದಲಿತರ ಬಗ್ಗೆ ಕಾಳಜಿ ಇರಬೇಕು ಎಂದು ತಿಳಿಸಿದರು. ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್ ಮಾತನಾಡಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಲಾಗಿದೆ. ಲಿಂಗ, ಜಾತಿ, ಆರ್ಥಿಕತೆ ಸೇರಿ ಹಲವು ಮಾನದಂಡ ಆಧಾರದಲ್ಲಿ ಕೀಳರಿಮೆ ಬೆಳೆಯುತ್ತಿದ್ದು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಹೇಳಿದರು. ಪರಸ್ಪರ ಸ್ವಾತಂತ್ರ್ಯ ಗೌರವಿಸಿ ಹಕ್ಕುಗಳ ಬಗ್ಗೆ ಚರ್ಚೆ ಆಗಬೇಕಿದೆ. ಮನುಷ್ಯರ ನಡುವೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇರಬೇಕು. ಭಗವದ್ಗೀತೆ, ಮನುಸ್ಮತಿ, ಬೈಬಲ್, ಕುರಾನ್ ಆಯಾ ಧರ್ಮದ ಜನರು ಹೇಗಿರಬೇಕು ಎಂದು ಹೇಳಿವೆ. ಆದರೆ, ಸರ್ವ ಧರ್ಮೀಯರು ಹೇಗೆ ಇರಬೇಕು ಎಂಬುದನ್ನು ಸಂವಿಧಾನ ಹೇಳಿದೆ ಎಂದು ತಿಳಿಸಿದರು. ಕ್ರೌರ್ಯವನ್ನು ಶೌರ್ಯವೆಂದು ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ. ಮಾಂಸ ಸೇವನೆ, ಪ್ರೀತಿ ಕೂಡ ಅಪರಾಧ ಆಗುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ಗುಂಪುಗಳಿವೆ. ಮತೀಯ ಶಕ್ತಿಗಳು ಜಗತ್ತಿನಲ್ಲಿ ತಲ್ಲಣ ಸೃಷ್ಟಿ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಮಹಾಯುದ್ಧದ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸಾಕಷ್ಟು ಆಯಿತು. ನೈಸರ್ಗಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಇದನ್ನು ಗಮನಿಸಿದ ವಿಶ್ವ ನಾಯಕರು ಪ್ರಪಂಚದ ಉಳಿವಿಗೆ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾದರು ಎಂದು ಹೇಳಿದರು. ವೇದ, ಉಪನಿಷತ್ತುಗಳಲ್ಲಿ ಕೂಡ ಮಾನವೀಯ ಗುಣಗಳನ್ನು ಎತ್ತಿ ಹಿಡಿಯಲಾಗಿದೆ. ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ ಸೇರಿ ಅನೇಕರು ಇದನ್ನು ಪ್ರತಿಪಾದಿಸಿದ್ದಾರೆ. ಮಾನವ ಹಕ್ಕುಗಳು ಭಾರತೀಯ ಸಂಸ್ಕೃತಿಯ ಭಾಗವಾಗಿವೆ. ಆಧುನಿಕ ಕಾಲದಲ್ಲಿ ಕೆಲ ಕಾರಣಗಳಿಗೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಕಾನೂನು ಮೂಲಕ ಪಾಠ ಕಲಿಸಬೇಕಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಪ್ರಾಚಾರ್ಯ ಡಾ.ಜಿ.ಎಸ್. ಯತೀಶ್, ವಕೀಲ ಬಿ.ಎಂ. ಹನುಮಂತಪ್ಪ ಇದ್ದರು.