

ದಾವಣಗೆರೆ : ನಗರದ ಹೊರ ವಲಯದ ಲೋಕಿಕೆರೆ ರಸ್ತೆಯ ಎಸ್.ಎ. ರವೀಂದ್ರನಾಥ್ ನಗರದ 36 ಕುಟುಂಬಗಳನ್ನು ತಾಲೂಕು ಆಡಳಿತ ತೆರವುಗೊಳಿಸಲು ಮುಂದಾಗಿರುವುದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಈ ಕುಟುಂಬಗಳು 15-20 ವರ್ಷದಿಂದ ಅಲ್ಲಿ ನೆಲೆಸಿವೆ. 1 ಎಕರೆ ವಿಸ್ತೀರ್ಣದಲ್ಲಿರುವ ಈ ಕುಟುಂಬಗಳನ್ನು ತೆರವುಗೊಳಿಸುವಂತೆ ಇತ್ತೀಚೆಗೆ ನ್ಯಾಯಾಲಯ ಆದೇಶಿಸಿದೆ. ಆ ಕುಟುಂಬಗಳನ್ನು ತೆರವುಗೊಳಿಸುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಆ ನಿವಾಸಿಗಳಿಗೆ ಆತಂಕ ಕಾಡುತ್ತಿದೆ. ನ್ಯಾಯಾಲಯದ ಆದೇಶವನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ಬಡ ಕುಟುಂಬಗಳನ್ನು ತೆರವುಗೊಳಿಸಿದರೆ ಅಕ್ಷರಶಃ ಬೀದಿಪಾಲಾಗುತ್ತೇವೆ. ಪರ್ಯಾಯ ನಿವೇಶನ ಅಥವಾ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ. ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನಾ ಖಾನಂ, ಮುಖಂಡರಾದ ಕರಿಬಸಪ್ಪ, ಸರೋಜಾ ಹಾಗೂ ಇತರರು ಆ ಸ್ಥಳದಲ್ಲಿ ಶುಕ್ರವಾರ ಸಭೆ ಸೇರಿ ಮುಂದೇನು ಮಾಡಬೇಕು ಎನ್ನುವ ಕುರಿತು ಚರ್ಚಿಸಿದರು.