

ದಾವಣಗೆರೆ : ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅರ್ಹ ಬಡ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಲ್ ಇಂಡಿಯಾ ಯೂತ್ ಫೆಡರೇಶನ್ (ಎಐವೈಎಫ್) ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು. ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ನಗರದ ಪಂಪಾಪತಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ನಿವೇಶನ ಮತ್ತು ವಸತಿ ರಹಿತರ ಕಾರ್ಯಾಗಾರದಲ್ಲಿ ಮಾತನಾಡಿದರು. ಸೂರು ಹೊಂದುವುದು ಬಡ ಜನರ ಕನಸಾಗಿರುತ್ತದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ಹೇಗೆ ಮುಂದುವರಿಯಬೇಕು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಎಲ್ಲಿ ಅರ್ಜಿ ಸಲ್ಲಿಸಬೇಕು, ಪ್ರಕ್ರಿಯೆಗಳು ಏನು ಎನ್ನುವ ಅರಿವು ಇರುವುದಿಲ್ಲ. ಅಂಥವರಿಗೆ ನೆರವಾಗುವುದು ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದರು. ಬಸವ, ಅಂಬೇಡ್ಕರ್, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಿವೆ. ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಗೊತ್ತಿರುವುದಿಲ್ಲ. ಅಂಥವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿರುತ್ತದೆ ಎಂದರು. ಫಲಾನುಭವಿಗಳು ತಮ್ಮ ಹಕ್ಕನ್ನು ಪಡೆಯಲು ಬಿಪಿಎಲ್ ಕಾರ್ಡ್ ಸೇರಿದಂತೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಸಂಘಟಿತವಾಗಿ ಮಾಡಿದಾಗ ಸುಲಭವಾಗುತ್ತದೆ. ಗಂಗಾವತಿ, ಬಳ್ಳಾರಿ, ಚಿಕ್ಕಮಗಳೂರು ಇನ್ನಿತರ ಕಡೆಗಳಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ದಾವಣಗೆರೆ ಜಿಲ್ಲೆಯಲ್ಲೂ ಅಂಥ ಪ್ರಯತ್ನ ಆರಂಭವಾಗಿದೆ. ಮೊದಲ ಹಂತದಲ್ಲಿ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆಗಳಿಗೆ ಮಹಿಳೆಯರೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಬರುವಂತೆ ನೋಡಿಕೊಳ್ಳಬೇಕು. ಅದಾಗದಿದ್ದರೆ ಸೌಲಭ್ಯ ಸಿಗುವುದಿಲ್ಲ ಎಂದು ವಿವರಿಸಿದರು. ನಗರ ಪ್ರದೇಶಗಳಲ್ಲಿ ಸಲ್ಲಿಸಿದ ಅರ್ಜಿಗಳು ವೆಬ್‌ಸೈಟ್‌ಗೆ ಅಪ್‌ಲೋಡ್ ಆಗುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷೃ ವಹಿಸಿದೆ. ಇದನ್ನು ವಸತಿ ಸಚಿವರ ಗಮನಕ್ಕೂ ತಂದಿದ್ದೇವೆ. ಮುಂಬರುವ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ನಿವೇಶನ, ಮನೆಯನ್ನು ಪಕ್ಷದಿಂದ ಕೊಡುವುದಿಲ್ಲ, ಸರ್ಕಾರದ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ನೀಡುತ್ತೇವೆ. ಸರ್ಕಾರ ಮತ್ತು ಫಲಾನುಭವಿಗಳ ನಡುವಿನ ಸೇತುವೆಯಂತೆ ಪಕ್ಷ ಕೆಲಸ ಮಾಡಲಿದೆ ಎಂದು ತಿಳಿಸಿದರು. ಗ್ರಾಮೀಣ ಫಲಾನುಭವಿಗಳು ಗ್ರಾಮ ಪಂಚಾಯಿತಿಗಳಲ್ಲಿ, ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಬೇಡಿಕೆ ಇಲ್ಲದಿದ್ದರೆ ತಮಗೆ ಬೇಕಾದವರಿಗೆ ಸೌಲಭ್ಯ ಹಂಚಿಕೆ ಮಾಡಿಬಿಡುತ್ತಾರೆ. ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ವಸತಿ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಜಮೀನು ಖರೀದಿಸಿ ಹಂಚಿಕೆ ಮಾಡಬೇಕು ಎಂದರು. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಫಲಾನುಭವಿಗಳು ಕಾಯ್ದೆ, ನಿಯಮಗಳ ಕುರಿತು ತಿಳಿದಿರಬೇಕು. ಪಕ್ಷದ ಕಾರ್ಯಕರ್ತರು ಫಲಾನುಭವಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಪಕ್ಷದ ಜಗಳೂರು ತಾಲೂಕು ಕಾರ್ಯದರ್ಶಿ ಮಹಮ್ಮದ್ ಬಾಷಾ ಇದ್ದರು.