ಜಾತಿಗಣತಿ ವೇಳೆ ನೀಡಿ ಸರಿಯಾದ ಮಾಹಿತಿ

dvg-hostel_20250804233050935.jpg
Published on

ದಾವಣಗೆರೆ  : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಡೆಸುವ ಜಾತಿಗಣತಿಯ ವೇಳೆ ಮೇದಾರ ಸಮಾಜದವರು ಸರಿಯಾದ ಮಾಹಿತಿ ನೀಡಬೇಕು ಎಂದು, ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಪಾಟೀಲ್ ಮನವಿ ಮಾಡಿದರು.  ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಶಿವಶರಣ ಮೇದಾರ ಕೇತೇಶ್ವರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ನಮ್ಮ ಸಮಾಜದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 41 ಸಾವಿರ ಇದೆ. ಈಗಿನ ಜನಸಂಖ್ಯೆ 4.5 ಲಕ್ಷದಷ್ಟಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವೂ ಜಾತಿಗಣತಿಗೆ ಮುಂದಾಗಿವೆ. ಈ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಜಾತಿ ಕಾಲಂನಲ್ಲಿ ಸರಿಯಾದ ಮಾಹಿತಿಯನ್ನು ನಮೂದಿಸಬೇಕು. ಆಗ ಮಾತ್ರ ನಮ್ಮ ನಿಜವಾದ ಶಕ್ತಿ ಏನೆಂಬುದು ಸರ್ಕಾರಕ್ಕೆ ಮನವರಿಕೆಯಾಗುತ್ತದೆ. ಅದರಿಂದ ನುದಾನ ಹಂಚಿಕೆಯೂ ಸರಿಯಾಗಿ ನಡೆಯುತ್ತದೆ ಎಂದು ಹೇಳಿದರು.  ದಾವಣಗೆರೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣವಾಗಿದೆ. ಈ ಮಾದರಿಯ ಹಾಸ್ಟೆಲ್‌ಗಳು ರಾಜ್ಯದ ಇತರ ಜಿಲ್ಲೆಗಳಲ್ಲೂ ನಿರ್ಮಾಣವಾಗಬೇಕು. ಕೇತೇಶ್ವರ ಭವನಗಳಾಗಬೇಕು. ಈ ಉದ್ದೇಶಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.  ಚಿತ್ರದುರ್ಗ ಮೇದಾರ ಗುರುಪೀಠ ಶ್ರೀ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಸಮಾಜದ ಜಿಲ್ಲಾಧ್ಯಕ್ಷ ಎಂ. ಮೈಲಾರಪ್ಪ, ದಾವಣಗೆರೆ ಮೇದಾರ ಸಮಾಜದ ಅಧ್ಯಕ್ಷ ಟಿ. ಬಸವರಾಜ, ಪ್ರಧಾನ ಕಾರ್ಯದರ್ಶಿ ಗಿರೀಶ್ ಯು. ಹುಗ್ಗಿ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಟಿ. ಯೋಗೀಶ್, ಮುಖಂಡರಾದ ಕೆ. ಹನುಮಂತಪ್ಪ, ಎಂ. ತಿಮ್ಮಣ್ಣ, ಕೆ.ಟಿ. ವೆಂಕಟೇಶ್, ಎನ್.ಟಿ. ಕೃಷ್ಣಪ್ಪ, ಟಿ. ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net