ಹೊರಗುತ್ತಿಗೆ ಪದ್ಧತಿ ರದ್ದುಪಡಿಸಲು ಆಗ್ರಹ

dvg-hostel.jpg
Published on

ದಾವಣಗೆರೆ  : ಹಾಸ್ಟೆಲ್ ಅಡುಗೆ ಹಾಗೂ ಕಾವಲುಗಾರರ ನೇಮಕಾತಿಯಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಜಿಲ್ಲಾ ಮಟ್ಟದ ಸೊಸೈಟಿ ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.  ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಹೊರಗುತ್ತಿಗೆ ಏಜೆನ್ಸಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.  ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿ ನಿಲಯಗಳಿವೆ. ಈ ಹಾಸ್ಟೆಲ್‌ಗಳಲ್ಲಿ ಹಲವು ವರ್ಷಗಳಿಂದ ಅಡುಗೆ ಸಿಬ್ಬಂದಿ ಹಾಗೂ ಕಾವಲುಗಾರರು ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಜೆನ್ಸಿಗಳು ನೀಡುತ್ತಿರುವ ಕಿರುಕುಳ ಮತ್ತು ವಂಚನೆಗೆ ಸಿಬ್ಬಂದಿ ಹೈರಾಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಹೊರಗುತ್ತಿಗೆ ಕಾರ್ಮಿಕರಿಗೆ ಏಜೆನ್ಸಿಗಳು ಭವಿಷ್ಯನಿಧಿ ಸೌಲಭ್ಯ ಕಲ್ಪಿಸಿಲ್ಲ. ನೇಮಕಾತಿ ಪತ್ರ, ಗುರುತಿನ ಚೀಟಿ ಕೂಡ ನೀಡುತ್ತಿಲ್ಲ. ರಜೆ ಸೇರಿ ಇತರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಕಾರ್ಮಿಕರ ಸವಲತ್ತುಗಳನ್ನು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.  ಹೊರಗುತ್ತಿಗೆ ಏಜೆನ್ಸಿಗಳನ್ನು ಕೂಡಲೇ ರದ್ದುಪಡಿಸಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ರಚಿಸಬೇಕು. ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಆಗ ಮಾತ್ರ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆಯಿಂದ ಮುಕ್ತಿ ಸಿಗುತ್ತದೆ ಎಂದು ಒತ್ತಾಯಿಸಿದರು.  ಮುಖಂಡರಾದ ಮಂಜುನಾಥ ಕೈದಾಳೆ, ಸ್ವಾಮಿ ನಿಂಗಪ್ಪ, ಈಶ್ವರ ಹರಿಹರ, ರವಿನಾಯ್ಕ, ನಿಂಗಪ್ಪ ಸಿದ್ದಮನಹಳ್ಳಿ, ಮಂಜುಳಮ್ಮ, ಮನೋಹರ್, ನವೀನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net