ಹಾಸ್ಟೆಲ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಭರವಸೆ

hostl.jpg
Published on

ದಾವಣಗೆರೆ : ನಗರದ ಎವಿಕೆ ಕಾಲೇಜು ರಸ್ತೆಯಲ್ಲಿನ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.
 ಸಂಘದ ಆವರಣದಲ್ಲಿ ಸೋಮವಾರ, ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
 ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನಕ್ಕಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಮಾರ್ಚ್ ಮುಗಿದ ಬಳಿಕ ಅವರನ್ನು ಭೇಟಿ ಮಾಡೋಣ ಎಂದು ವಿದ್ಯಾಸಂಸ್ಥೆಯ ಮುಖಂಡರಿಗೆ ತಿಳಿಸಿದರು.
 ಸ್ವಾತಂತ್ರ್ಯಕ್ಕೂ ಪೂರ್ವದಲ್ಲೆ ಗಾಂಧೀಜಿ ದಾವಣಗೆರೆಗೆ ಭೇಟಿ ನೀಡಿದಾಗ ಈ ಶಾಲೆಗೆ ಅಡಿಗಲ್ಲು ಹಾಕಿದ್ದರು. ಇಂತಹ ಇತಿಹಾಸವಿರುವ ಶಾಲೆಗೆ 92 ಲಕ್ಷ ರೂ.ಗಳನ್ನು ಮೊದಲ ಅನುದಾನವಾಗಿ ನೀಡಿದ್ದೇನೆ ಎಂದು ಹೇಳಿದರು.
 ಈ ಸಂಸ್ಥೆಯಲ್ಲಿ ಕಾಲೇಜು ಆಗಬೇಕಿತ್ತು. ಶಾಲಾ ಕಾಲೇಜುಗಳಲ್ಲಿ ಶೇ. 80ರಷ್ಟು ಸಿಬ್ಬಂದಿ ಕೊರತೆಯಾಗಿದೆ. ಶಿಕ್ಷಕರು, ಕ್ಲರ್ಕ್ ಸಹ ಇಲ್ಲ. ಈ ಹುದ್ದೆಗಳ ನೇಮಕಾತಿಗೆ ಸಿಎಂ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟದಲ್ಲೂ ಚರ್ಚೆ ಆಗಿದೆ. ರಾಜ್ಯವ್ಯಾಪಿ ನೇಮಕವಾದಾಗ ಈ ಶಾಲೆಗೂ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
 ಗಾಂಧೀಜಿ 1934ರಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೌರಾಯುಕ್ತರನ್ನು ಕರೆಸಿ ಜಾಗ ಗುರುತಿಸಿ, ಅಂದು ಶಾಲೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಶಾಲೆಯಲ್ಲಿ 5 ಕೊಠಡಿ ಹಾಗೂ ಒಂದು ಅಡುಗೆ ಕೋಣೆ ನಿರ್ಮಾಣಕ್ಕೆ 92 ಲಕ್ಷ ರೂ. ಶಾಸಕರ ಅನುದಾನದಿಂದ ನೀಡಲಾಗಿದೆ. ಹಾಸ್ಟೆಲ್ ನಿರ್ಮಾಣಕ್ಕೆ 3 ಕೋಟಿ ರೂ. ಅಗತ್ಯವಿದ್ದು, ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ ಹಾಗೂ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ತಿಳಿಸಿದರು.
 ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯ ಎ. ನಾಗರಾಜ್, ಮುಖಂಡರಾದ ಎಲ್.ಎಂ.ಎಚ್. ಸಾಗರ್, ಕೆ.ಚಂದ್ರಣ್ಣ, ಈಶ್ವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net