

ದಾವಣಗೆರೆ : ಅಂಗಾಂಗ ಹಾಗೂ ದೇಹದಾನದ ಬಗ್ಗೆ ಸಾರ್ವಜನಿಕರಿಗೆ ವರ್ಷವಿಡೀ ಅರಿವು ಮೂಡಿಸುವ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಬಿಎನ್‌ಪಿ(ಬ್ಯಾಂಕ್ ನೋಟ್ ಪೇಪರ್ ಮಿಲ್) ಸಹಯೋಗದಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯ ಡಿಐಇಸಿ ಸಭಾಂಗಣದಲ್ಲಿ ಗುರುವಾರ, ಸಿಎಸ್‌ಆರ್ ನಿಧಿಯಡಿ ನೀಡಲಾದ 2.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಕಾಯಿಲೆಗಳು ಹೆಚ್ಚಾಗಿದ್ದು ಕಿಡ್ನಿ, ಲಿವರ್ ಇನ್ನಿತರ ಅಂಗಾಂಗಗಳ ಸಮಸ್ಯೆಯನ್ನು ರೋಗಿಗಳು ಅನುಭವಿಸುತ್ತಿದ್ದಾರೆ. 60 ವರ್ಷದ ಸ್ಥಳೀಯ ಕಲಾವಿದರೊಬ್ಬರಿಗೆ ಲಿವರ್ ಕಸಿ ಮಾಡಬೇಕಿದ್ದು ಅವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರಿಗೆ ದಾನಿಗಳ ಮೂಲಕ ನೆರವಾಗಬೇಕಿದೆ ಎಂದು ತಿಳಿಸಿದರು. ಅಂಗಾಂಗ ಮತ್ತು ದೇಹದಾನದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಕೂಡಾ ಮಾಡಲಾಗುತ್ತಿದ್ದು ಬೇರೆ ರಾಜ್ಯಗಳಲ್ಲಿ ಈ ಅಂಶವು ಒಳಗೊಂಡಿಲ್ಲ. ಈ ಉದ್ದೇಶಕ್ಕಾಗಿ ಅನೇಕ ನೋಂದಾಯಿತ ಸಂಸ್ಥೆಗಳಿವೆ. ಇಂಥ ದಾನಗಳಿಂದ ಅನೇಕರ ಜೀವ ಉಳಿಸಬಹುದು. ಮಿದುಳಿನ ಭಾಗ (ಬ್ರೇನ್ ಸ್ಟೆಮ್) ನಿಷ್ಕ್ರಿಯವಾಗಿರುವ ರೋಗಿಗಳ ಕುಟುಂಬದ ಸದಸ್ಯರ ಮನವೊಲಿಸಿ ಮತ್ತೊಬ್ಬ ರೋಗಿಗೆ ನೆರವಾಗಬಹುದು ಎಂದರು. ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಎಡಿಸಿ ಶಿವಕುಮಾರ ಶೀಲವಂತ ಇದ್ದರು.