

ದಾವಣಗೆರೆ : ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು. ನಿರ್ಮಿತಿ ಕೇಂದ್ರದಿಂದ ಕ್ಷೇತ್ರದ ಹರಲೀಪುರ ಗ್ರಾಮದಲ್ಲಿ 18.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಆರೋಗ್ಯ ಉಪ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸತತ ಮಳೆಯಿಂದ ಕ್ಷೇತ್ರದ ಬಹುತೇಕ ರಸ್ತೆಗಳು ವಾಹನ ಸಂಚರಿಸದ ರೀತಿ ಹಾಳಾಗಿವೆ. ಹೀಗಾಗಿ, ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಮದ್ಯಪಾನಮುಕ್ತ ಗ್ರಾಮಕ್ಕೆ ಮುಖಂಡರು ಶಪಥ ಮಾಡಬೇಕು ಎಂದರು. ಮಾಜಿ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಆಯುಷ್ಮಾನ್ ಆರೋಗ್ಯ ಉಪಕೇಂದ್ರ ಮಂಜೂರು ಮಾಡಿಸಿದ್ದೆ. ಇನ್ನೂ ಹೆಚ್ಚಿನ ಅನುದಾನ ತರುವ ಮೂಲಕ ಈಗಿನ ಶಾಸಕರು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷೆ ಹೇಮಾಕ್ಷಿ ರವಿಕುಮಾರ್, ತಾಪಂ ಮಾಜಿ ಸದಸ್ಯರಾದ ಸತೀಶ್ ಪಟೇಲ್, ಬೆಳಲಗೆರೆ ಹನುಮಂತಪ್ಪ ,ಗ್ರಾಪಂ ಸದಸ್ಯರಾದ ಶಿವಮೂರ್ತಿ, ಧರ್ಮೇಂದ್ರ, ತಾಲೂಕು ಆರೋಗ್ಯ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು. ಬಾಕ್ಸ್... ಅಧಿಕಾರಿಗಳ ವಿರುದ್ಧ ಗರಂ ಹರಲೀಪುರ ಆರೋಗ್ಯ ಉಪ ಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಗುತ್ತಿಗೆದಾರ ಮತ್ತು ಇಂಜಿನಿಯರ್‌ಗಳಿಗೆ ತರಾಟೆಗೆ ತೆಗೆದುಕೊಂಡರು. ಕಟ್ಟಡ ಎಷ್ಟು ಚದರ ಅಡಿ ಇದೆ? ಕಟ್ಟಡದೊಳಗೆ ಏನೇನು ಮೂಲ ಸೌಲಭ್ಯ ಕಲ್ಪಿಸಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಹಾಗಿದ್ದರೆ ಈ ಕಟ್ಟಡ ಎಷ್ಟು ವರ್ಷ ಬಾಳಿಕೆ ಬರುತ್ತದೆ ಎಂಬುದು ಆ ದೇವರೇ ಬಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಳಪೆ ಕಾಮಗಾರಿ ಕಂಡು ಬಂದಿತ್ತು. ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್‌ಗೆ ತಾಕೀತು ಮಾಡಿದ್ದೆ. ಆದರೂ ಈ ಕಟ್ಟಡ ನೋಡಿದರೆ ಮೂಲಸೌಲಭ್ಯ ಕಲ್ಪಿಸದಿರುವುದು ಸಂಶಯ ಮೂಡಿದೆ. ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸರಿಯಾದ ಪಾಠ ಕಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.