

ದಾವಣಗೆರೆ : ನಗರದ ಕೆ.ಆರ್. ರಸ್ತೆಯ ಎಸ್.ಎಸ್. ಜನರಲ್ ಆಸ್ಪತ್ರೆಯ ಹಿಂಭಾಗದಲ್ಲಿ ಬಡವರ ಅನುಕೂಲಕ್ಕಾಗಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಅಳವಡಿಸಿರುವ ಹೆಚ್ಚುವರಿ 4 ಡಯಾಲಿಸಿಸ್ ಯಂತ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿದ್ದರೆ, ನರ್ಸ್‌ಗಳು ಇರುವುದಿಲ್ಲ. ಇದರಿಂದ ಬಡವರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಹೊಸ ಆಸ್ಪತ್ರೆ ಕಟ್ಟಲು ಜಾಗ ಖರೀದಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯ ಹಳೇ ಭಾಗದಲ್ಲಿ ಬಡವರು ಬಹಳ ಜನರಿದ್ದಾರೆ. ಇದುವರೆಗೆ ಈ ಆಸ್ಪತ್ರೆಯಲ್ಲಿ 12 ಡಯಾಲಿಸಿಸ್ ಯಂತ್ರಗಳಿದ್ದವು, ಈಗ 4 ಸೇರ್ಪಡೆ ಆಗಿರುವುದರಿಂದ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಡಯಾಲಿಸಿಸ್ ಚಿಕಿತ್ಸೆಯು ಜೀವ ಉಳಿಸುತ್ತದೆ. ಈ ಸೇವೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ಜತೆಗೆ ಒಳ್ಳೆಯ ರೀತಿಯಲ್ಲಿ ಮಾತನಾಡಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದು ಹೇಳಿದರು.
...
(ಬಾಕ್ಸ್)
ಕಿಡ್ನಿ ತಪಾಸಣೆ, ಜಾಗೃತಿ
ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಮುಂಬರುವ ದಿನಗಳಲ್ಲಿ ಕಿಡ್ನಿ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿ ಉಚಿತ ತಪಾಸಣೆ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್‌ನ ಲೈಫ್ ಟ್ರಸ್ಟಿಯೂ ಆಗಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇತ್ತೀಚಿನ ಜೀವನ ಶೈಲಿಯಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜುತನ ಸೇರಿ ವಿವಿಧ ಕಾರಣಗಳಿಂದ ಸಾರ್ವಜನಿಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಪಾಸಣೆ ನಡೆಸಿ ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ, ಮೂರನೇ ಹಂತಕ್ಕೆ ಹೋಗುವುದನ್ನು ತಡೆದು ಅಪಾಯ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಟ್ರಸ್ಟ್‌ನಿಂದ ಉಚಿತ ತಪಾಸಣೆ ಆರಂಭಿಸಲಾಗುವುದು ಎಂದರು.
ಟ್ರಸ್ಟ್ ವತಿಯಿಂದ ತಾಲೂಕಿನ ಕಕ್ಕರಗೊಳ್ಳ ಮತ್ತು ಅರಸಾಪುರ ಗ್ರಾಮಗಳನ್ನು ದತ್ತು ಪಡೆದು, ಅಲ್ಲಿನ ಜನರನ್ನು ತಪಾಸಣೆಗೆ ಒಳಪಡಿಸಿ, ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಎಸ್. ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ ವತಿಯಿಂದ ಗರ್ಭಿಣಿಯರ ಆರೋಗ್ಯ ತಪಾಸಣೆ, ಹೆರಿಗೆ, ಕ್ಯಾನ್ಸರ್ ತಪಾಸಣೆ, ನೇತ್ರ ಮತ್ತು ದಂತ ಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕಿರುವಾಡಿ ಗಿರಿಜಮ್ಮ, ಸಂಪನ್ನ ಮುತಾಲಿಕ್, ನಿರಂಜನ್, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಶುಕ್ಲಾ ಶೆಟ್ಟಿ, ಬಾಪೂಜಿ ಆಸ್ಪತ್ರೆ ಆಡಳಿತಾಧಿಕಾರಿ ಸತ್ಯನಾರಾಯಣ ಇದ್ದರು.
...
* ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ 16 ಡಯಾಲಿಸಿಸ್ ಯಂತ್ರಗಳು
* ಇದುವರೆಗೆ 16 ಸಾವಿರ ಉಚಿತ ಡಯಾಲಿಸಿಸ್
* ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಕಡೆ ಮೊಬೈಲ್ ಕ್ಲಿನಿಕ್