ಬರಗಾಲದಲ್ಲೂ ಇದೆ ಭರವಸೆಯ ಬೆಳಕು

dvg-samvada-03.jpg
Published on

ದಾವಣಗೆರೆ : ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರು ಕೂಡಾ ಏನಾಗುವುದೋ ಎನ್ನುವ ಆತಂಕವಿದೆ. ಇಂಥ ಬರಗಾಲದ ಸಂದರ್ಭವನ್ನು ರೈತರು ಎದೆಗುಂದದೆ ಹೇಗೆ ಎದುರಿಸಬೇಕು, ಪರ್ಯಾಯ ಮಾರ್ಗಗಳು ಏನು?.
 ತೋಟಗಾರಿಕೆ ಬೆಳೆಗಳ ನಿರ್ವಹಣೆ ಸಂಬಂಧ ಇಂಥ ಹಲವು ಉಪಯುಕ್ತ ವಿಚಾರಗಳ ಮೇಲೆ ಬೆಳಕು ಚೆಲ್ಲಲು ರೈತರು-ವಿಜ್ಞಾನಿಗಳ ಸಂವಾದವನ್ನು ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
 ಮತ್ತೆ ಮಳೆಗಾಲ ಬರಲು ಇನ್ನೂ 8 ತಿಂಗಳು ಕಾಯಬೇಕು. ಅಲ್ಲಿಯ ವರೆಗೆ ನೀರಿನ ನಿರ್ವಹಣೆಯನ್ನು ಯೋಜಿತವಾಗಿ ಮಾಡಬೇಕು. ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು. ತಂತ್ರಜ್ಞಾನದ ಉಪಯೋಗ ಮಾಡಿಕೊಳ್ಳಬೇಕು ಎಂದು ತಜ್ಞರು ರೈತರಿಗೆ ಸಲಹೆ ನೀಡಿದರು.
 ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2013-14ರಲ್ಲಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿತ್ತು, ಅದಾಗಿ 10 ವರ್ಷಗಳ ನಂತರ ಮತ್ತೆ ಅಂಥದೇ ಸಂಕಷ್ಟ ನಮ್ಮ ಮುಂದಿದೆ. ಮುಂದೆ ಇದಕ್ಕಿಂತ ಕಷ್ಟದ ದಿನಗಳು ಬಂದರೂ ಎದುರಿಸಲು ಸಜ್ಜಾಗಬೇಕು ಎಂದು ತಿಳಿಸಿದರು.
 ಒಂದೇ ಬೆಳೆಯನ್ನು ಅವಲಂಬಿಸುವುದು ಬಿಟ್ಟು ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು. ಅಡಕೆಯ ಜತೆಗೆ ಅಂತರ ಬೆಳೆಗಳನ್ನು ಬೆಳೆಯಬೇಕು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ ತಂತ್ರಜ್ಞಾನವನ್ನು ಅರಿತು ಅದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
 ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಮಾತನಾಡಿ, ಜಿಲ್ಲೆಯಲ್ಲಿ 2 ಲಕ್ಷ ರೈತ ಕುಟುಂಬಗಳಿವೆ. ಇಂದಿನ ಕೃಷಿ ಸಂಕಷ್ಟವನ್ನು ಒಗ್ಗಟ್ಟಾಗಿ ಎದುರಿಸಲು ಸಂಕಲ್ಪ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚು ಜನರು ಅರಿವು ಹೊಂದಬೇಕು. ಪರಿಸರವನ್ನು ಕಾಪಾಡಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೇಷ್ಮಾ ಪರ್ವಿನ್ (ದಾವಣಗೆರೆ), ತೋಟಯ್ಯ (ಜಗಳೂರು), ಪ್ರಗತಿಪರ ರೈತ ಹೆದ್ನೆ ಮುರುಗೇಶಪ್ಪ, ನಿಟ್ಟೂರು ಶಿವಣ್ಣ ಇದ್ದರು. ಮಣ್ಣು ವಿಜ್ಞಾನಿ ಎಚ್.ಎಂ. ಸಣ್ಣಗೌಡ್ರ ಸ್ವಾಗತಿಸಿದರು. ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಟಿ.ಜಿ. ಅವಿನಾಶ್ ನಿರೂಪಿಸಿದರು.
 ...
 * ವಾಣಿಜ್ಯ ಬೆಳೆಯತ್ತ ಒಲವು
 ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿದ್ದು, ಆಹಾರಧಾನ್ಯ ಬೆಳೆಯುವ ಪ್ರದೇಶವನ್ನು ಈ ಬೆಳೆಗಳು ನುಂಗಿ ಹಾಕಿವೆ ಎಂದು ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.
 ಒಂದು ಅರ್ಥದಲ್ಲಿ ಇದು ಹಣದ ಹಿಂದೆ ಓಡುವ ಪ್ರವೃತ್ತಿಯಾದರೂ, ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಜಿಲ್ಲೆಯಲ್ಲಿ 98 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆಗಳಿದ್ದು, ಅದರಲ್ಲಿ ಸಿಂಹಪಾಲು 83 ಸಾವಿರ ಹೆಕ್ಟೇರ್ ಅಡಕೆಯೇ ಇದೆ ಎಂದು ಮಾಹಿತಿ ನೀಡಿದರು.
 ಕಳೆದ 3 ವರ್ಷಗಳಲ್ಲಿ ಅಡಕೆ ಬೆಳೆಯುವ ಪ್ರದೇಶ 50 ಸಾವಿರ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ. ಆದರೆ ಇತರ ತೋಟಗಾರಿಕೆ ಬೆಳೆಗಳ ಮೇಲೆ ಇದು ಪರಿಣಾಮ ಬೀರಿದೆ. 12 ಸಾವಿರ ಹೆಕ್ಟೇರ್ ಇದ್ದ ತೆಂಗು 7700 ಹೆಕ್ಟೇರ್‌ಗೆ ಕುಸಿದಿದೆ. ಮಾವು 3500 ಹೆಕ್ಟೇರ್‌ನಿಂದ 1200 ಹೆಕ್ಟೇರ್‌ಗೆ ಇಳಿಕೆಯಾಗಿದೆ. 2021 ರಲ್ಲಿ ಜಗಳೂರು ತಾಲೂಕಿನಲ್ಲಿ 3300 ಹೆಕ್ಟೇರ್ ಇದ್ದ ಈರುಳ್ಳಿ ಈ ವರ್ಷ ಕೇವಲ 300-350 ಹೆಕ್ಟೇರ್ ಮಾತ್ರ ಉಳಿದುಕೊಂಡಿದೆ. ಹೂವು, ಹಣ್ಣಿನ ಬೆಳೆಗಳ ಮೇಲೂ ಪರಿಣಾಮವಾಗಿದೆ ಎಂದರು.
 ಬರಗಾಲದ ಈ ಸಂದರ್ಭದಲ್ಲಿ ಕಡಿಮೆ ನೀರು ಬಳಸಿ ನೀರಾವರಿ ಮಾಡುವುದನ್ನು ಕಲಿಯಬೇಕು. ಲಭ್ಯ ನೀರನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net