ಮಕ್ಕಳಿಗೆ ಆಟ, ಪಾಠದ ಜತೆಗೆ ತೋಟದ ಕಲಿಕೆ

dvg-story.jpg
Published on

ರಮೇಶ ಜಹಗೀರದಾರ್ ದಾವಣಗೆರೆ
 ತೋಟಗಾರಿಕೆಯ ಮಹತ್ವ, ಪ್ರಯೋಜನಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಎಂಬ ವಿನೂತನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಿಂದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಹೊರಟಿದೆ.
 ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯಪುರ, ಕಲಬುರಗಿ ನಗರಗಳ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವರ್ಷಕ್ಕೆ 19 ಸಾವಿರದಂತೆ 5 ವರ್ಷಗಳ ಅವಧಿಯಲ್ಲಿ 95 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
 ತೋಟಗಾರಿಕೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ವಿಷಯಾಧಾರಿತ ತರಬೇತಿಗಳನ್ನು ನೀಡಿ, ಮುಂಬರುವ ದಿನಗಳಲ್ಲಿ ಅವರು ತೋಟಗಾರಿಕೆ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೇರೇಪಣೆ ನೀಡಿದಂತಾಗುತ್ತದೆ ಎಂಬುದು ಈ ಯೋಜನೆಯ ಆಶಯವಾಗಿದೆ.
 ಹಣ್ಣು ಮತ್ತು ತರಕಾರಿಗಳು ಖನಿಜಾಂಶ, ಜೀವಸತ್ವ, ನಾರಿನ ಅಂಶ, ಸೂಕ್ಷ್ಮ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವುದರಿಂದ ಸಮತೋಲನ ಆಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ‘ನೋಡಿ ಕಲಿ - ಮಾಡಿ ತಿಳಿ’ ಎನ್ನುವಂತೆ ತೋಟಗಾರಿಕೆ ಕೌಶಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ನೀಡಲಾಗುತ್ತದೆ.
 ಈ ಯೋಜನೆಗಾಗಿ ಪ್ರಸ್ತುತ ಸಾಲಿಗೆ 50 ಲಕ್ಷ ರೂ. ನಿಗದಿಪಡಿಸಲಾಗಿದೆ. ಬೆಂಗಳೂರು ನಗರದಲ್ಲಿ 4 ಸಾವಿರ ಹಾಗೂ ಇತರ ಮಹಾ ನಗರಗಳಲ್ಲಿ ತಲಾ 1500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಮುಂಬರುವ ವರ್ಷಗಳಲ್ಲಿ ಇತರ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು.
 ...
 * ಏನೇನು ತರಬೇತಿ?
 ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಸಸ್ಯಾಭಿವೃದ್ಧಿ ವಿಧಾನಗಳು, ಸಸಿ ಮಡಿ ಮಾಡುವುದು, ಮಣ್ಣಿನ ಫಲವತ್ತತೆ ಬಗ್ಗೆ ಅರಿವು, ಹೈಡ್ರೋಪೋನಿಕ್ಸ್ ಕುರಿತು ಮಾಹಿತಿ, ಎರೆಹುಳು ಗೊಬ್ಬರ, ಸುಧಾರಿತ ಕಾಂಪೋಸ್ಟ್ ತಯಾರಿಕೆ, ವೈಜ್ಞಾನಿಕ ಜೇನು ಕೃಷಿ ಪದ್ಧತಿ, ಅಣಬೆ ಉತ್ಪಾದನೆ, ಪೌಷ್ಟಿಕಾಂಶ ಕೈತೋಟ, ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸುವ ವಿಶೇಷ ಕಾರ್ಯಾಚರಣೆಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು.
 ಪ್ರತಿ ತರಬೇತಿಯಲ್ಲಿ 100 ವಿದ್ಯಾರ್ಥಿಗಳು ಇರಲಿದ್ದಾರೆ. ಬೆಳಗ್ಗೆ ತಾಂತ್ರಿಕ ವಿಷಯ ಮಂಡನೆ, ಮಧ್ಯಾಹ್ನ ಪ್ರಾಯೋಗಿಕ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪವರ್ ಪಾಯಿಂಟ್ ಪ್ರೆಸೆಂಟೇಶನ್, ವಿಡಿಯೋಗಳನ್ನು ಬಳಸಿ ಮಕ್ಕಳಿಗೆ ವಿಷಯ ಮನದಟ್ಟಾಗುವಂತೆ ಮಾಡಲಾಗುತ್ತದೆ.
 ತರಬೇತಿಯ ವೇಳೆ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕಿಟ್ ಕೊಡಲಾಗುವುದು. ಅದರಲ್ಲಿ ಬ್ರೋಷರ್, ಬೀಜಗಳು, ಹಣ್ಣಿನ ಗಿಡ, ಜೈವಿಕ ಮಿಶ್ರಣ, ಟ್ರೇ ಇತ್ಯಾದಿ ಪರಿಕರಗಳು ಇರಲಿವೆ. ತರಬೇತಿಯ ನಂತರ ಮೌಲ್ಯಮಾಪನವನ್ನೂ ಮಾಡಲು ಸೂಚಿಸಲಾಗಿದೆ.
 ...
 (ಕೋಟ್)
 ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಮಗೆ ಮಾರ್ಗಸೂಚಿ ಬಂದಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1500 ಮಕ್ಕಳಿಗೆ ತರಬೇತಿ ನೀಡುವ ಗುರಿ ನೀಡಲಾಗಿದೆ.
  ಡಾ. ಜಿ.ಸಿ. ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಉಪ ನಿರ್ದೇಶಕ, ದಾವಣಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net