ಸುಗ್ರೀವಾಜ್ಞೆ ಹಿಂಪಡೆಯಲು ಒತ್ತಾಯ

dvg raita protest june 29
Published on

ದಾವಣಗೆರೆ: ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆಯಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ಸೋಮವಾರ ತಾಲೂಕಿನ ಹೊನ್ನೂರು, ಹುಚ್ಚವ್ವನಹಳ್ಳಿ ಗ್ರಾಪಂಗಳ ಎದುರು ವಿವಿಧೆಡೆ ಪ್ರತಿಭಟನೆ ನಡೆಸಿದರು. ಅಲ್ಲಿನ ಪಿಡಿಒಗಳ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

ಕಾರ್ಪೋರೇಟ್ ಕಂಪನಿಗಳ ವ್ಯಾಪಾರಿ ಹಿಡಿತಕ್ಕೆ ಅನುಕೂಲ ಕಲ್ಪಿಸುವ ಅಗತ್ಯ ವಸ್ತುಗಳ ತಿದ್ದುಪಡಿ, ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡದಿರುವ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದದ ಸುಗ್ರೀವಾಜ್ಞೆ ಕೈಬಿಡಬೇಕು.

ನೀರಾವರಿ ಪಂಪ್‌ಸೆಟ್‌ಗಳಿಗೆ, ಕುಟೀರಜ್ಯೋತಿ, ಭಾಗ್ಯಜ್ಯೋತಿ ಇತ್ಯಾದಿ ಸಬ್ಸಿಡಿ ವಿದ್ಯುತ್ ಸರಬರಾಜು ಖಾತ್ರಿಪಡಿಸದ, ಖಾಸಗಿ ಕಂಪನಿಗಳಿಗೆ ವಿದ್ಯುತ್ ನಿಗಮಗಳನ್ನು ಮಾರುವ ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು. ರಿಯಲ್ ಎಸ್ಟೇಟ್ ಮಾಫಿಯಾದ ದುರ್ಲಾಭವಾಗಲಿರುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಕೈಬಿಡಬೇಕೆಂದು ಆಗ್ರಹಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಹುಚ್ಚವ್ವನಹಳ್ಳಿ ಬಣದ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಪುಟ್ಟಣ್ಣಯ್ಯ ಬಣದ ಜಿಲ್ಲಾ ಕಾರ್ಯದರ್ಶಿ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಅಖಿಲ ಭಾರತ ಕಿಸಾನ್‌ಸಭಾದ ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ್, ಕೆಪಿಆರ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ಇ.ಶ್ರೀನಿವಾಸ್, ಐರಣಿ ಚಂದ್ರು, ಸತೀಶ್ ಅರವಿಂದ್, ಎಸ್.ಮೌಲಾನಾಯ್ಕ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಟಿ.ಎಸ್. ಸುನಿತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net