

ಹೊನ್ನಾಳಿ : ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಜನ ಸಮುದಾಯಕ್ಕೆ ಸಂವಿಧಾನದ ಮೂಲಕ ಆತ್ಮವಿಶ್ವಾಸ ತುಂಬಿದ ಡಾ. ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಸಮಾಜ ಸುಧಾರಕ ಎಂದು ಪ್ರಾಚಾರ್ಯ ಡಾ. ಬಿ.ಜಿ. ಧನಂಜಯ ಹೇಳಿದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶ, ರಾಜ್ಯಶಾಸ್ತ್ರ ವಿಭಾಗ, ಯುವ ರೆಡ್‌ಕ್ರಾಸ್ ಘಟಕ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2 ರ ಸಹಯೋಗದಲ್ಲಿ ಮಂಗಳವಾರ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುದೀರ್ಘ 75 ವರ್ಷಗಳ ಸಂವಿಧಾನದ ಯಶಸ್ಸು ಬಾಬಾ ಸಾಹೇಬರಿಗೆ ಸಲ್ಲಬೇಕು. ಅವರು ಅಸ್ಪಶ್ಯತೆ ಎಂಬ ಪಿಡುಗಿಗೆ ಕತ್ತರಿ ಪ್ರಯೋಗ ಮಾಡಿದ ಸಾಮಾಜಿಕ ರೋಗ ಚಿಕಿತ್ಸಕ. ದೇಶವನ್ನು ಶಾಸನಬದ್ಧವಾಗಿ ಒಂದುಗೂಡಿಸಿದ ಮಹಾನ್ ಕಾನೂನು ಪಂಡಿತ. ಜಗತ್ತಿಗೆ ಮಾದರಿಯಾದ ಜನತಂತ್ರ ವ್ಯವಸ್ಥೆ, ಶಾಸಕಾಂಗ, ಕಾರ್ಯಾಂಗ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಳವಡಿಸಿದ ಶ್ರೇಷ್ಠ ತಜ್ಞ ಎಂದು ಬಣ್ಣಿಸಿದರು. ಗ್ರಂಥಪಾಲಕ ಪ್ರೊ. ಎಂ. ನಾಗರಾಜ ನಾಯ್ಕ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದ ಯಶಸ್ಸು ಸಂವಿಧಾನವನ್ನು ಅವಲಂಬಿಸಿದೆ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಘವೇಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಜನಿ, ಬೆಳ್ಳುಳ್ಳಿ ಕೊಟ್ರೇಶ, ಸಹ ಪ್ರಾಧ್ಯಾಪಕಿಯರಾದ ಎಚ್.ವಿ. ಗೀತಾ, ಡಾ. ಬೀನಾ, ಪವಿತ್ರಾ, ಸಹಾಯಕ ಪ್ರಾಧ್ಯಾಪಕರಾದ ತಿಪ್ಪೇಶ, ಉಪನ್ಯಾಸಕ ಕರಿಬಸಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.