

ಹೊನ್ನಾಳಿ : ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಈ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ರಹಿತ ಆಡಳಿಹಾಗೂತಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಿಕ್ಕ ಗೆಲುವು ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು. ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ವಿಜಯೋತ್ಸವ ಆಚರಿಸಿ ಮಾತನಾಡಿದರು. ಉಪಚುನಾವಣೆಗೆ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಡಾ ಪ್ರಕರಣವನ್ನು ವಿನಾಕಾರಣ ಮುನ್ನೆಲೆಗೆ ತಂದು ಸಿಎಂ ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರು. ಆದರೆ, ಮೂರು ಕ್ಷೇತ್ರಗಳ ಮತದಾರರು ವಿಪಕ್ಷಗಳ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಬಹುದೊಡ್ಡ ಗೆಲುವು ತಂದು ಕೊಟ್ಟಿದ್ದಾರೆ ಎಂದರು. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು ಎನ್ನುವ ಸಂದೇಶವನ್ನು ಈ ಚುನಾವಣೆ ಮೂಲಕ ನೀಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರವನ್ನು ವಿಪಕ್ಷಗಳು ಕೆಡವಲು ಹೂಡಿದ ಕುತಂತ್ರಗಳು ಫಲಿಸಲಿಲ್ಲ. ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ. ನನ್ನ ಜೀವನ ತೆರೆದ ಪುಸ್ತಕ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಾವು ಯಾವುದೇ ರೀತಿಯ ತನಿಖೆಗೂ ಸಿದ್ದ ಎಂದು ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿವೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಮೂರು ಉಪ ಚುನಾವಣೆಗಳಲ್ಲಿ ಅವರೇ ಮುಖಭಂಗ ಅನುಭವಿಸಿದ್ದಾರೆ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿಜಯೋತ್ಸವದಲ್ಲಿ ಪುರಸಭೆ ಅಧ್ಯಕ್ಷ ಮೈಲಪ್ಪ, ಹರಳಹಳ್ಳಿ ಎಚ್.ಬಿ. ಬೆನಕಪ್ಪ, ಎಚ್.ಡಿ. ವಿಜೇಂದ್ರಪ್ಪ, ಎಚ್.ಎ. ನರಸಿಂಹಪ್ಪ, ಸರಳಿನಮನೆ ರಾಜು, ಬೆನಕನಹಳ್ಳಿ ಪಿ. ವೀರಣ್ಣ, ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಮಲ್ಲೇಶಪ್ಪ, ಎಚ್.ಬಿ. ಅಣ್ಣಪ್ಪ, ಮಾದಪ್ಪ, ಎಚ್.ಬಿ. ದೇವರಾಜ್ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.