

ಹೊನ್ನಾಳಿ: ಪ್ರಪಂಚದಲ್ಲಿ ಅತ್ಯಂತ ಸರಳವಾಗಿ ಅರ್ಥವಾಗುವ ಹಾಗೂ ಸಂಸ್ಕಾರಯುತ ಭಾಷೆ ಎಂದರೆ ಅದು ಕನ್ನಡ ಎಂದು ಶಾಸಕ ಡಿ.ಜಿ. ಶಾಂತನ ಗೌಡ ಹೇಳಿದರು. ಕನಕದಾಸ ರಂಗಮಂದಿರದಲ್ಲಿ ರಾಜ್ಯೋತ್ಸವ ಉದ್ದೇಶಿಸಿ ಮಾತನಾಡಿ, ಹೊರ ರಾಜ್ಯದ ಐಎಎಸ್ ಅಧಿಕಾರಿಗಳು ಕರ್ನಾಟಕಕ್ಕೆ ಬಂದ ಕೆಲವೇ ತಿಂಗಳಲ್ಲಿ ಸರಳವಾಗಿ ಕನ್ನಡ ಕಲಿತು ಮಾತನಾಡುತ್ತಾರೆ ಎಂದು ಶ್ಲಾಘಿಸಿದರು.ಎಂದರು. ನವಂಬರ್ ತಿಂಗಳಲ್ಲಿ ಮಾತ್ರ ಭಾಷಣ ಮಾಡದೆ ವರ್ಷದ 365 ದಿನವೂ ಕನ್ನಡ ನಾಡು ನುಡಿಯ ಸೇವೆ ಮಾಡಬೇಕು ಎಂದು ಮನವಿ ಮಾಡಿದರು. ಭುವನೇಶ್ವರಿ ದೇವಿ ಪ್ರತಿಮೆ ಮಾಡಿಸುವೆ: ತುಮ್ಮಿನಕಟ್ಟೆ ರಸ್ತೆ ಅಗಲೀಕರಣದ ನಂತರ ಸ್ಥಳಾವಕಾಶ ಮಾಡಿಕೊಂಡು ಕನ್ನಡ ಧ್ವಜಸ್ಥಂಭ, ಜಯಚಾಮರಾಜೇಂದ್ರ ವೃತ್ತ ನಾಮಫಲಕ ಹಾಗೂ ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಮಾಡಿಸಿಕೊಡುವೆ ಎಂದು ಶಾಸಕರು ಭರವಸೆ ನೀಡಿದರು. ಗೈರಾದ ಅಧಿಕಾರಿಗಳಿಗೆ ನೋಟಿಸ್: ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ತಹಸೀಲ್ದಾರ್ ಪಟ್ಟರಾಜಗೌಡ ಅವರಿಗೆ ಸೂಚಿಸಿದರು. ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಅಂಗಡಿಗಳ ಮುಂದೆ ಅನ್ಯಭಾ ಷೆಯ ನಾಮಫಲಕ ಇದ್ದರೆ ಅಂತಹ ಅಂಗಡಿಗಳಿಗೆ ಪರವಾನಗಿ ನೀಡಲ್ಲ. ಹೊಸದಾಗಿ ಅಂಗಡಿ ಮಾಡುವವರು ಮೊದಲು ಕನ್ನಡದ ನಾಮಫಲಕ ಹಾಕಬೇಕು. ಇಲ್ಲದಿದ್ದರೆ ಪರವಾನಗಿ ರದ್ದು ಮಾಡುತ್ತೇವೆ ಎಂದು ತಿಳಿಸಿದರು. ಉಪನ್ಯಾಸಕ ಡಾ.ಬಸವರಾಜ ಮಾತನಾಡಿ, ನಾವು ನಿಜವಾದ ಕನ್ನಡಿಗರಾದರೆೆ ಮೊದಲು ಪ್ರತಿ ಮನೆಯಲ್ಲಿ ಕಿರು ಗ್ರಂಥಾಲಯ ಸ್ಥಾಪಿಸಿ, ಒಳ್ಳೆ ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ಓದಲಿಕ್ಕೆ ಕೊಡಬೇಕು. ಆಗ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಮುರಿಗೆಪ್ಪಗೌಡ, ಕನ್ನಡಪರ ಸಂಘಟನೆಯ ಶ್ರೀನಿವಾಸ್, ವಿನಯ್ ವಗ್ಗರ್, ಮಂಜುನಾಥ್ ಮಾತನಾಡಿದರು. ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭಾಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಪುರಸಭಾ ಸದಸ್ಯ ರಾಜಣ್ಣ, ತಾಪಂ ಇಒ ಪ್ರಕಾಶ್, ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಸೈನಿಕ ಎಂ. ವಾಸಪ್ಪ, ವಿವಿಧ ಕನ್ನಡಪರ ಸಂಘಟನೆ ಪ್ರಮುಖರಾದ ರಾಜು ಕಣಗಣ್ಣಾರ್, ಪ್ರದೀಪ್, ಹಳದಪ್ಪ, ಚೇತನ್, ಶಂಕರನಾಯ್ಕ ಇದ್ದರು.