

ದಾವಣಗೆರೆ : ರಾಜ್ಯದಲ್ಲಿ ಉತ್ಪಾದಿಸುವ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ವೇದಿಕೆಯನ್ನು ಒದಗಿಸುವ ಸಲುವಾಗಿ ಇಲಾಖೆಯಿಂದ ‘ಝೇಂಕಾರ’, ‘ಜೀವನೋಲ್ಲಾಸಕ್ಕೆ ಜೇನು’ ಎಂಬ ಬ್ರಾೃಂಡ್ ನೋಂದಾಯಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ನಗರದ ಗೃಹ ಕಚೇರಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜೇನು ಉದ್ಯಮಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಐತಿಹಾಸಿಕ ನಗರ - ಮೈಸೂರಿನಲ್ಲಿ ತೋಟಗಾರಿಕೆ ಇಲಾಖೆಯಡಿ 15 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟವನ್ನು ಲೋಕಾರ್ಪಣೆಗೊಳಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭೌಗೋಳಿಕ ಚಿಹ್ನೆ ಹೊಂದಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆಗಳ ಸಂರಕ್ಷಣೆಗಾಗಿ 14 ಹೆಕ್ಟೇರ್ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆಗಳನ್ನು ಹಾಗೂ 175 ರೈತರಿಗೆ ತರಬೇತಿಗಳನ್ನು ನೀಡಲಾಗಿದೆ ಎಂದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ರಾಜ್ಯಾದ್ಯಂತ 11 ಮಹಾನಗರ ಪಾಲಿಕೆಗಳಲ್ಲಿ 13,860 ವಿದ್ಯಾರ್ಥಿಗಳಿಗೆ 138 ಕಾರ್ಯಕ್ರಮಗಳ ಮೂಲಕ ತರಬೇತಿ ನೀಡಲಾಗಿದೆ. ಬೀಜದಿಂದ ಮಾರುಕಟ್ಟೆಯ ವರೆಗಿನ ಪೂರಕ ಚಟುವಟಿಕೆಗಳಿಗೆ ಅವಶ್ಯವಿರುವ ಎಲ್ಲ ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ರೈತರಿಗೆ, ಸಾರ್ವಜನಿಕರಿಗೆ ಒದಗಿಸಲು ತೋಟಗಾರಿಕೆ ಕಿಸಾನ್ ಮಾಲ್ ಕೇಂದ್ರಗಳನ್ನು ಮೈಸೂರು, ಮದ್ದೂರು, ದಾವಣಗೆರೆ, ಧಾರವಾಡ ಮತ್ತು ಬಾಗಲಕೋಟೆಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ 16 ವಿವಿಧ ತೋಟಗಾರಿಕೆ ಬೆಳೆಗಳ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ತೋಟಗಾರಿಕೆಯಲ್ಲಿ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಅನುವಾಗುವಂತೆ ಉನ್ನತ ಮಟ್ಟದ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‌ನ್ನು ಕೊಪ್ಪಳ ಜಿಲ್ಲೆ, ಕನಕಗಿರಿ ತಾಲೂಕು ಸಿರಿವಾರದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಬೆಂಗಳೂರು ಹಾಪ್‌ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು 15 ಕೋಟಿ ರೂ. ದುಡಿಯುವ ಬಂಡವಾಳ ನೆರವನ್ನು ಒದಗಿಸಲಾಗಿದೆ ಎಂದರು.