

ದಾವಣಗೆರೆ : ದೇಶದಲ್ಲಿ ಆಂತರಿಕ ಶಾಂತಿ ಹಾಗೂ ಸಾಮಾಜಿಕ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಗೃಹರಕ್ಷಕರ ಪಾತ್ರವು ಸಹ ಗಣನೀಯವಾಗಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆಯ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ದೇಶದಲ್ಲಿ ಸುಮಾರು 5.74 ಲಕ್ಷ ಗೃಹರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 1962ರ ಹೋಮ್ ಗಾರ್ಡ್ ಕಾಯ್ದೆ 35ರಂತೆ ರಾಜ್ಯದ ಸುಮಾರು 420 ಘಟಕಗಳಲ್ಲಿ ಗೃಹರಕ್ಷಕರು ಜಾತ್ರೆ ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸರೊಂದಿಗೆ ನಿರಂತರ ಶ್ರಮಿಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ವರ್ಗ ಇದಾಗಿದೆ ಎಂದು ಶ್ಲಾಘಿಸಿದರು.
1940ರಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ಸಮರ ನಡೆಯುತ್ತಿದ್ದಾಗ ಬ್ರಿಟನ್ ಸೈನ್ಯದ ಸಹಕಾರಕ್ಕೆ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಬರುವಂತೆ ಸೇನೆಯ ಕಾರ್ಯದರ್ಶಿ ಆಂತೋನಿ ಈಡನ್ ಕರೆ ಕೊಟ್ಟಿದ್ದು ’ಲೋಕಲ್ ಡಿಫೆನ್ಸ್ ವಾಲೆಂಟೈರ್ಸ್ ಹುಟ್ಟಿಗೆ ಕಾರಣವಾಯಿತು. ಮುಂದೆ ಇದೇ ’ಹೋಂ ಗಾರ್ಡ್’ ಎಂಬ ಹೆಸರನ್ನು ಪಡೆದು ನಮ್ಮ ದೇಶದಲ್ಲೂ ರೂಢಿಗೆ ಬಂದಿದೆ ಎಂದರು.
ಸ್ವಯಂಪ್ರೇರಣೆಯಿಂದ ದೇಶ ಸೇವೆ ಸಲ್ಲಿಸುವುದು ಆತ್ಮತೃಪ್ತಿಯ ಜತೆಗೆ ಆನಂದ ನೀಡುವ ಜತೆಗೆ ಪುಣ್ಯ ಲಭಿಸುತ್ತದೆ. ಗೃಹರಕ್ಷಕರು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಹೋಂಗಾರ್ಡ್ಸ್ ಕಮಾಡೆಂಟ್ ಡಾ.ಎಸ್.ಎಚ್. ಸುಜಿತ್‌ಕುಮಾರ್ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದವರು ವಲಯಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ವಿಜೇತರಾಗಲಿ ಎಂದು ಆಶಿಸಿದರು.
ಜಿಲ್ಲಾ ಗೃಹರಕ್ಷಕದಳ ಸ್ಟಾಫ್ ಆಫೀಸರ್ ಸರಸ್ವತಿ ಇದ್ದರು. ಆಶಾ ಪ್ರಾರ್ಥಿಸಿದರು, ಶೋಭಾ ಸ್ವಾಗತಿಸಿದರು. ಅಂಬರೀಶ್ ನಿರೂಪಿಸಿದರು, ವಿಜಯಲಕ್ಷ್ಮಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಚ್.ಬಿ. ಮಂಜುನಾಥ ಅವರನ್ನು ಗೌರವಿಸಲಾಯಿತು ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.