ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆಸಲು ಕ್ರಮ

parameshwar.jpg
Published on

ದಾವಣಗೆರೆ : ಹಾಸನ ಪೆನ್‌ಡ್ರೈವ್ ಪ್ರಕರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆತರುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ವಲ್ ಜರ್ಮನಿಯಲ್ಲಿ ಎಷ್ಟು ದಿನ ಇರಲು ಸಾಧ್ಯ?. ಹೆಚ್ಚೆಂದರೆ 3 ರಿಂದ 6 ತಿಂಗಳು ಇರಬಹುದಷ್ಟೆ. ಅಲ್ಲೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ ಎಂದರು.
 ಪ್ರಜ್ವಲ್ ಜರ್ಮನಿಗೆ ಹೋಗಿರುವುದಕ್ಕೆ ಸಾಕ್ಷಿಯಾಗಿ ಅವರ ವಿಮಾನ ಪ್ರಯಾಣದ ಟಿಕೆಟ್‌ಗಳು ದೊರಕಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ವಿದೇಶದಿಂದ ಕರೆತರಲು ಅಗತ್ಯ ಕ್ರಮಗಳನ್ನು ಎಸ್‌ಐಟಿ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
 ದೂರು ಬಂದಿರುವ ಹಿನ್ನೆಲೆಯಲ್ಲಿ ಹಾಜರಾಗಿ ಉತ್ತರ ನೀಡುವಂತೆ ಪ್ರಜ್ವಲ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿದೇಶದಿಂದ ಕರೆತರಲು ಕೇಂದ್ರದ ನೆರವು ಪಡೆಯಬೇಕೆ ಬೇಡವೆ ಎಂಬ ನಿರ್ಧಾರವನ್ನು ಎಸ್‌ಐಟಿಗೆ ಬಿಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ, ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ತನಿಖೆಯ ವರದಿಯನ್ನು ಶೀಘ್ರವೆ ನಿಡುವಂತೆ ಎಸ್‌ಐಟಿಗೆ ತಿಳಿಸಲಾಗಿದೆ ಎಂದು ಹೇಳಿದರು.
 ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರುವ ವರೆಗೆ ರಾಜ್ಯ ಸರ್ಕಾರ ಏನು ಮಾಡುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿ, ವಿಮಾನ ನಿಲ್ದಾಣಗಳು, ಕಸ್ಟಮ್ಸ್, ಪಾಸ್‌ಪೋರ್ಟ್, ಇಮಿಗ್ರೇಷನ್ ಎಲ್ಲವೂ ಕೇಂದ್ರದ ವ್ಯಾಪ್ತಿಗೇ ಬರುತ್ತವೆ. ಹಾಗಾಗಿ ಇದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲವೆ? ನಮ್ಮ ಕಡೆಗೇಕೆ ಬೆರಳು ತೋರಿಸುತ್ತಾರೆ ಎಂದು ಕೇಳಿದರು.
 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್. ರಾಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ಮುಖಂಡರಾದ ಪ್ರಕಾಶ್ ಪಾಟೀಲ್, ಬಿ.ಎಚ್. ವೀರಭದ್ರಪ್ಪ, ಎಚ್.ಕೆ. ಬಸವರಾಜ್, ಸೋಗಿ ಶಾಂತಕುಮಾರ್, ತಾಜ್‌ಪೀರ್, ಎಸ್. ವಿಜಯ ಕುಮಾರ್ ಇದ್ದರು.
 ...
 
 (ಬಾಕ್ಸ್)
 ಕಾನೂನು, ಸುವ್ಯವಸ್ಥೆ ಸರಿಯಾಗಿದೆ
 ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
 ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಕೊಲೆ, ಅತ್ಯಾಚಾರ, ಇನ್ನಿತರ ಕ್ರಿಮಿನಲ್ ಚಟುವಟಿಕೆಗಳು ಎಷ್ಟು ನಡೆದಿದ್ದವು, ಎಷ್ಟು ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂಬ ಅಂಕಿ ಅಂಶಗಳನ್ನು ಸದನದಲ್ಲಿ ತಿಳಿಸುತ್ತೇನೆ ಎಂದರು.
 ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಯನ್ನು ತ್ವರಿತ ಗತಿಯಲ್ಲಿ ಕ್ರಮ ಕೈಗೊಂಡು ಬಂಧಿಸಲಾಯಿತು. ಆರೋಪಿ ಚೆನ್ನೈನಲ್ಲಿ ಟೋಪಿ ಖರೀದಿಸಿದ ಜಾಡು ಹಿಡಿದು ಎನ್‌ಐಇ ಮತ್ತು ಕರ್ನಾಟಕ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇಷ್ಟು ಬೇಗನೆ ಆರೋಪಿಯನ್ನು ಬಂಧಿಸಿದ ಇತಿಹಾಸವೆ ಇಲ್ಲ ಎಂದು ಹೇಳಿದರು.
 ನೇಹಾ ಹತ್ಯೆ ಆರೋಪಿಯನ್ನು ಒಂದು ಗಂಟೆಯೊಳಗೆ ಬಂಧಿಸಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಮಾದಕ ವಸ್ತು ರಹಿತ ಸಮಾಜ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದೇವೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಚೆನ್ನಾಗಿದೆ. ಯಾವುದೇ ಪ್ರಕರಣದ ತನಿಖೆಯನ್ನು ನಿರ್ಲಕ್ಷೃ ಮಾಡಿಲ್ಲ ಎಂದು ತಿಳಿಸಿದರು.
 
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net