ಬೆಣ್ಣೆ ನಗರಿಯಲ್ಲಿ ಹೋಳಿ ಹಬ್ಬದ ರಂಗು

dvg-kama-dahana.jpg
Published on

ದಾವಣಗೆರೆ  : ಬಣ್ಣದ ಹಬ್ಬ ಹೋಳಿ ಆಚರಣೆ ಬೆಣ್ಣೆನಗರಿ ದಾವಣಗೆರೆಯಲ್ಲಿ ರಂಗೇರಿದೆ. ಹಬ್ಬದ ಮುನ್ನಾದಿನವಾದ ಗುರುವಾರ ಮಾರುಕಟ್ಟೆಯಲ್ಲಿ ಬಣ್ಣಗಳ ಮತ್ತು ವಾಟರ್ ಗನ್ ಇನ್ನಿತರ ವಸ್ತುಗಳ ಮಾರಾಟ ಜೋರಾಗಿತ್ತು.  ಸಾಮಾನ್ಯ ಬಣ್ಣಗಳ ಮಾರಾಟದ ಜತೆಗೆ ಸಾವಯವ ಮತ್ತು ಹರ್ಬಲ್ ಬಣ್ಣಗಳ ವ್ಯಾಪಾರವೂ ನಡೆಯಿತು. ಬಣ್ಣ ಎರಚಲು ಬಗೆ ಬಗೆಯ ಪಿಚಕಾರಿಗಳನ್ನು ಇಡಲಾಗಿತ್ತು. ತ್ರಿಶೂಲ, ಕೊಡಲಿ ಇನ್ನಿತರ ಆಕಾರದ ಪಿಚಕಾರಿಗಳು ಗಮನ ಸೆಳೆದವು.  ವಾಟರ್ ಗನ್‌ಗಳಲ್ಲಿ ವೈವಿಧ್ಯತೆ ಇತ್ತು. ಮ್ಯಾನ್ಯುಯಲ್ ವಾಟರ್ ಗನ್‌ಗಳು ಹಾಗೂ ಎಲೆಕ್ಟ್ರಿಕ್ ವಾಟರ್ ಗನ್‌ಗಳೂ ಇದ್ದವು. ಎಕೆ-47 ಮಾದರಿಯಲ್ಲೂ ಕಂಡುಬಂದವು. ಇವುಗಳ ಜತೆಗೆ ವಾಟರ್ ಬಲೂನ್‌ಗಳು, ಪೀಪಿಗಳು, ಮುಖಕ್ಕೆ ಧರಿಸುವ ಮಾಸ್ಕ್‌ಗಳನ್ನೂ ಮಾರಾಟ ಮಾಡಲಾಯಿತು. ಅವುಗಳಲ್ಲಿ ಜೋಕರ್ ಚಿತ್ರವಿರುವುದು, ಆಂಜನೇಯನ ಮುಖ ಇನ್ನಿತರ ಮಾದರಿಗಳಿದ್ದವು.  ಹೋಳಿ ಬಂತೆಂದರೆ ನಗರದ ಪಿ.ಜೆ. ಬಡಾವಣೆಯ ರಾಂ ಆ್ಯಂಡ್ ಕೋ ವೃತ್ತ ಕಳೆಗಟ್ಟುತ್ತದೆ. ರಾಂ ಆ್ಯಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ವೃತ್ತವನ್ನು ಬಣ್ಣದ ಬಟ್ಟೆಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಶುಕ್ರವಾರ ಬೆಳಗ್ಗೆ 7.30ಕ್ಕೆ ಆಚರಣೆ ಆರಂಭವಾಗಲಿದೆ.  ರೇನ್ ಡ್ಯಾನ್ಸ್‌ಗಾಗಿ ವೃತ್ತದ ಮಧ್ಯ ಭಾಗದಲ್ಲಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ಡಿಜೆ ಇರಲಿದೆ. ಮಜ್ಜಿಗೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.  ಗುರುವಾರ ಸಂಜೆ ಕಾಮದಹನದ ಪೌರಾಣಿಕ ಹಿನ್ನೆಲೆಯ ಬಗ್ಗೆ ಜಾಗೃತಿ ಮೂಡಿಸುವ ದೃಶ್ಯ ರೂಪಕವನ್ನು ಎಲ್.ಇ.ಡಿ. ಪರದೆಯ ಮೇಲೆ ಪ್ರದರ್ಶಿಸಲಾಯಿತು. ವೃತ್ತದ ಸುತ್ತಲೂ ಹಾಗೂ ನಗರದ ವಿವಿಧ ಸರ್ಕಲ್‌ಗಳಲ್ಲಿ ಹೋಳಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ರಾಂ ಆ್ಯಂಡ್ ಕೋ ವೃತ್ತದಲ್ಲಿ ಇಟ್ಟಿರುವ ಸೆಲ್ಫಿ ಸ್ಟಾೃಂಡ್ ಬಳಿ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net