

ದಾವಣಗೆರೆ : ಹಿಂದುಗಳ ಮೇಲಿನ ದೌರ್ಜನ್ಯ ತಡೆಯಲು ಆರ್ಥಿಕ ಪಾರಮ್ಯ ಸಾಧಿಸುವುದೇ ಪ್ರಮುಖ ಅಸ್ತ್ರ ಎಂದು ಉಪನ್ಯಾಸಕ ಆದರ್ಶ ಗೋಖಲೆ ಸಲಹೆ ನೀಡಿದರು. ಹಿಂದುಗಳ ಮೇಲಿನ ದೌರ್ಜನ್ಯ ವಿರೋಧಿಸಿ ನಗರದ ಬಂಬೂ ಬಜಾರ್‌ನಲ್ಲಿ ಹಿಂದು ಸುರಕ್ಷಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ನಮ್ಮೆಲ್ಲ ಆರ್ಥಿಕ ವ್ಯವಹಾರ, ವ್ಯಾಪಾರವನ್ನು ಹಿಂದುಗಳ ಜತೆಗೇ ಮಾಡಬೇಕು. ಇದರಿಂದ ನಮ್ಮ ಹಣ ನಮ್ಮವರಿಗೇ ತಲುಪಿ ಆರ್ಥಿಕ ಪಾರಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು. ಹಿಂದು ಹಬ್ಬಗಳನ್ನು ಶಾಶ್ವತವಾಗಿ ಬಂದ್ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಹಿಂದುಗಳ ಭಾವನೆಯನ್ನು ಕೆಣಕಲಾಗುತ್ತಿದೆ ಎಂದು, ಮೈಸೂರು ದಸರಾವನ್ನು ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರಿಂದ ಉದ್ಘಾಟಿಸಿದ ವಿವಾದವನ್ನು ಪ್ರಸ್ತಾಪಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಮಠಗಳು ಹಿಂದುಗಳ ಆಸ್ತಿಯಲ್ಲ ಎಂದು ಬಿಂಬಿಸುವ ಸನ್ನಿವೇಶ ಸೃಷ್ಟಿಯಾಗಬಹುದು. ನಮಗಿರುವುದು ಒಂದೇ ಹಿಂದು ರಾಷ್ಟ್ರ, ಅದನ್ನು ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯ ಹಿಂದೆ ಹಿಂದು ಸಮಾಜವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಹಿಂದುತ್ವವೊಂದೇ ನಮ್ಮ ಜಾತಿ ಎಂದು ತಿಳಿಸಿದರು. ‘ಹಿಂದು ಮಲಗಿದರೆ ಕುಂಭಕರ್ಣ, ಎದ್ದು ನಿಂತರೆ ವೀರ ಬಜರಂಗಿ’ ಎನ್ನುವ ಮೂಲಕ ಹಿಂದುಗಳು ಜಾಗೃತರಾಗಬೇಕು ಎಂಬ ಸಂದೇಶ ರವಾನಿಸಿದರು. ಅರುಣ್ ಸ್ವಾಗತಿಸಿದರು. ಮಾಜಿ ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಷಣ್ಮುಖ ಪ್ರಾರ್ಥಿಸಿದರು. ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳು ಮಲ್ಲಿಕಾರ್ಜುನ, ಬಿ.ಜಿ. ಅಜಯಕುಮಾರ್, ಚಂದ್ರಶೇಖರ ಪೂಜಾರ್, ಕೆ.ಎಂ. ಸುರೇಶ್, ಸಂಘ ಪರಿವಾರದ ಮುಖಂಡ ವಿನಾಯಕ ರಾನಡೆ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.