

ದಾವಣಗೆರೆ : ಸ್ವಾಂತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟಲು ಹಾಗೂ ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯು ಮಂಗಳವಾರ ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.
ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆ.15 ಮತ್ತು ಜನವರಿ 26ರಂದು ರಾಷ್ಟ್ರಧ್ವಜ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ, ಅದೇ ದಿನ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆ, ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುತ್ತವೆ. ಪ್ಲಾಸ್ಟಿಕ್ ಧ್ವಜಗಳು ಬೇಗನೆ ನಾಶವಾಗುವುದಿಲ್ಲ. ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನ ನೋಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಈ ರೀತಿ ಆಗುವ ಅವಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (103/2011) ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ, ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜದ ಅಪಮಾನ ನಿಲ್ಲಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಮತ್ತು ಶಿಕ್ಷಣ ಇಲಾಖೆಗಳು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದವು. ಇದರೊಂದಿಗೆ ಕೇಂದ್ರ ಸರ್ಕಾರವೂ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ ಎಂದಿದ್ದಾರೆ.
ಪ್ರಸಕ್ತ ವರ್ಷ ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣಗಳಲ್ಲಿ(ವೆಬ್‌ಸೈಟ್) ತ್ರಿವರ್ಣ ಮಾಸ್ಕ್ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ತ್ರಿವರ್ಣ ಮಾಸ್ಕ್ ಬಳಕೆಯಿಂದ ರಾಷ್ಟ್ರಧ್ವಜದ ಪಾವಿತ್ಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ, ತ್ರಿವರ್ಣ ಮಾಸ್ಕ್ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು.
ರಾಷ್ಟ್ರೀಯ ಚಿಹ್ನೆಗಳ ಅಪಮಾನಗೊಳಿಸುವುದನ್ನು ತಡೆಯಲು ಸಮಿತಿಯು ಪ್ರತಿ ವರ್ಷ ‘ರಾಷ್ಟ್ರಧ್ವಜ ಗೌರವಿಸಿ’ ಅಭಿಯಾನ ನಡೆಸುತ್ತದೆ. ಅನುಮತಿ ಇಲ್ಲದಿರುವಾಗಲೂ ಸರ್ಕಾರದ ಅಧಿನಿಯಮ ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರರು ಹಾಗೂ ಧ್ವಜ ಸಂಹಿತೆ ಪ್ರಕಾರ ಧ್ವಜ ಗೌರವಿಸದ ಜನರು, ಸಂಸ್ಥೆಗಳು ಮತ್ತು ಗುಂಪುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಮುಖಂಡರು ವಿನಂತಿಸಿದ್ದಾರೆ.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ರಾಧಾ ರಾಯ್ಕರ್, ಗೋ ರಕ್ಷಕ ಪಡೆಯ ಜಿಲ್ಲಾ ಸಂಚಾಲಕ ಮಲ್ಲೇಶ್, ಬಜರಂಗದಳದ ನಾಗರಾಜ್, ಸುರೇಶ್, ವಿನಾಯಕ ಇತರರು ಇದ್ದರು.