

ದಾವಣಗೆರೆ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತಗಳನ್ನು ತಡೆಗಟ್ಟಿ ಜೀವ ಉಳಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವು ಕಡೆಗಳಲ್ಲಿ ವಿದ್ಯುದ್ದೀಪಗಳೇ ಇಲ್ಲ, ಕತ್ತಲೆ ಇರುತ್ತದೆ. ಜಾಲಿ ಗಿಡಗಳು ಬೆಳೆದು ಅಡ್ಡಿಯಾಗಿರುತ್ತವೆ. ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಅದನ್ನೆಲ್ಲ ಗಮನಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಅದು ನಿಮ್ಮ ಜವಾಬ್ದಾರಿಯೂ ಆಗಿದೆ. ಇಲ್ಲದಿದ್ದರೆ ಇಂಥ ಸಭೆಗಳನ್ನು ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು. ಕೆಳ ಸೇತುವೆಗಳ ಬಳಿ ವಿದ್ಯುದ್ದೀಪಗಳು ಇರುವುದಿಲ್ಲ. ವಾಯುವಿಹಾರಕ್ಕೆ ಹೋದವರು ಅಪಘಾತಕ್ಕೀಡಾಗುತ್ತಾರೆ. ಸರಗಳ್ಳತನ ಪ್ರಕರಣಗಳೂ ನಡೆಯುತ್ತವೆ. ಆ ಭಾಗದಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಅವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ಕೆಲವು ಹೋಟೆಲ್, ವಾಣಿಜ್ಯ ಮಳಿಗೆಗಳು ಇರುವುದರಿಂದಲೂ ಸಮಸ್ಯೆಯಾಗುತ್ತದೆ ಎಂದು ಎನ್‌ಎಚ್‌ಎಐ ಅಧಿಕಾರಿ ಗೌರವ್ ಗಮನ ಸೆಳೆದರು. ಅಂಥ ಸಮಸ್ಯಾತ್ಮಕ ವಲಯಗಳನ್ನು ಸರ್ವೇ ಮಾಡಿಸಿ. ಸಚಿವರ ಗಮನಕ್ಕೆ ತರೋಣ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಎಸ್‌ಎಸ್ ಹೈಟೆಕ್ ಆಸ್ಪತ್ರೆ ಬಳಿಯ ಅಂಡರ್‌ಪಾಸ್ ಸಮೀಪ ಸಂಚಾರ ಒತ್ತಡ, ಅಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಬಾಡಾ ಕ್ರಾಸ್ ಬಳಿ ಫ್ಲೈಓವರ್ ನಿರ್ಮಿಸುವ ಯೋಜನೆ ಟೆಂಡರ್ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲಿನ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ವ್ಯತ್ಯಾಸವಿದೆ, ಅದನ್ನು ಸರಿಪಡಿಸಬೇಕು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ತಿಳಿಸಿದರು.