

ದಾವಣಗೆರೆ : ವಿಶ್ವ ಹಿಮೊಫಿಲಿಯಾ ದಿನಾಚರಣೆ (ಏ. 17) ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ ಹನಗವಾಡಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರುವಾರ ಮಧ್ಯಾಹ್ನ 3 ಗಂಟೆಗೆ ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಏ. 18 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಯಲಹಂಕದ ಭಾರತೀಯ ವೈದ್ಯಕೀಯ ಸಂಘದಲ್ಲಿ ಹಿಮೊಫಿಲಿಯಾ ಕುರಿತು ಅತಿಥಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. 21 ರಂದು ಇಂಡಿಯನ್ ಅಸೋಸಿಯೇಷನ್ ಆಫ್ ಪೆಥಾಲಾಜಿಸ್ಟ್ ಆ್ಯಂಡ್ ಮೈಕ್ರೋಬಯಾಲಾಜಿಸ್ಟ್ಸ್ ಕರ್ನಾಟಕ ಚಾಪ್ಟರ್ ವತಿಯಿಂದ ಹಿಮೊಫಿಲಿಯಾ ಕುರಿತು ವರ್ಚ್ಯುಯಲ್ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದೇ ದಿನ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಮತ್ತು ಪ್ಯಾರಾಮೆಡಿಕಲ್ ವೃತ್ತಿಪರರಿಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. 22 ರಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಏ. 28 ರಂದು ದಾವಣಗೆರೆಯ ಸುಕ್ಷೇಮ ಆಸ್ಪತ್ರೆಯಲ್ಲಿ ರಕ್ತಸ್ರಾವ ರೋಗಿಗಳಿಗೆ ಎಚ್‌ಪಿವಿ ಲಸಿಕಾ ಅಭಿಯಾನ ಆಯೋಜಿಸಲಾಗಿದೆ. 29 ರಂದು ನಗರದಲ್ಲಿ ಜಿಲ್ಲೆಯ ಸರ್ಕಾರಿ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ವೃತ್ತಿಪರರಿಗೆ ತರಬೇತಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕ ಹಿಮೊಫಿಲಿಯಾ ಸೊಸೈಟಿ 35 ವರ್ಷಗಳನ್ನು ಪೂರೈಸಿದೆ. ಚಿಕಿತ್ಸೆಯ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ, ರೋಗಿಗಳಿಗೆ ಶಿಬಿರ ಇನ್ನಿತರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗಿದೆ. ಒಂದೇ ಸೂರಿನಡಿ ಎಲ್ಲ ರಕ್ತರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಹಿಮೊಫಿಲಿಯಾ ರೋಗ ಪತ್ತೆ ಹಚ್ಚುವ ಪ್ರಯೋಗಾಲಯಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಜಗತ್ತಿನಲ್ಲಿ 4 ಲಕ್ಷ ಹಿಮೊಫಿಲಿಯಾ ರೋಗಿಗಳಿದ್ದಾರೆ ಎಂಬ ಅಂದಾಜಿದೆ. ಆ ಪೈಕಿ 1 ಲಕ್ಷ ರೋಗಿಗಳು ಭಾರತದಲ್ಲೇ ಇದ್ದಾರೆ. ಇದುವರೆಗೆ 27 ಸಾವಿರ ಮಂದಿ ಮಾತ್ರ ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿ ಇವರ ಸಂಖ್ಯೆ 6 ರಿಂದ 7 ಸಾವಿರ ಎಂದು ತಿಳಿಸಿದ್ದಾರೆ.