

ದಾವಣಗೆರೆ : ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸುವುದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಮತ್ತೊಂದು ಸುತ್ತಿನ ಅಭಿಯಾನವನ್ನು ಆರಂಭಿಸಿದೆ. ಕೆಲ ತಿಂಗಳ ಹಿಂದೆ ಈ ಅಭಿಯಾನ ಆರಂಭಿಸಿದಾಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಅದಾದ ನಂತರ ಮತ್ತೆ ಯಾವುದೇ ಕ್ರಮ ಆಗಿರಲಿಲ್ಲ. ಕಳೆದ ಎರಡು ದಿನಗಳಿಂದ ಸಂಚಾರ ಪೊಲೀಸರು ಮತ್ತೆ ಅಂಥದೇ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಹಳೇ ಭಾಗದ ಗಡಿಯಾರ ಕಂಬದ ಸಮೀಪದ ಲಕ್ಷ್ಮೀ ವೃತ್ತದ ಬಳಿ ಸೋಮವಾರ ಸಂಚಾರ ಠಾಣೆ ಪೊಲೀಸರು 300ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶಪಡಿಸಿಕೊಂಡರು. ಈ ಅಭಿಯಾನ ಇನ್ನಷ್ಟು ಚುರುಕಾಗಲಿದೆ ಎಂದು ಮೂಲಗಳು ತಿಳಿಸಿವೆ.