ಫುಲ್ ಹೆಲ್ಮೆಟ್‌ನಿಂದ ನೀಡಿ ವಿನಾಯಿತಿ

dvg-helmet_20250228004903072.jpg
Published on

ದಾವಣಗೆರೆ : ಕಾನೂನಿನ ಬಗ್ಗೆ ನಮಗೆ ಗೌರವವಿದೆ. ಆದರೆ ಬೇಸಿಗೆ ಮುಗಿಯುವ ವರೆಗೆ ಫುಲ್ ಹೆಲ್ಮೆಟ್‌ನಿಂದ ವಿನಾಯಿತಿ ನೀಡುವಂತೆ, ನಗರದ ಹೈಸ್ಕೂಲ್ ಮೈದಾನದಲ್ಲಿರುವ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಗುರುವಾರ ನಡೆದ ಸಾರ್ವಜನಿಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.  ಸಭೆಯಲ್ಲಿ ಮಾತನಾಡಿದ ಎಲ್ಲರೂ ಈ ಬೇಸಿಗೆಯಲ್ಲಿ ಫುಲ್ ಹೆಲ್ಮೆಟ್ ಕಡ್ಡಾಯ ಬೇಡ ಎಂದು ಒತ್ತಾಯಿಸಿದರು. ಅದರಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು.  ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಬಿಸಿಲು ಹೆಚ್ಚಾಗಿರುವ ಬಳ್ಳಾರಿ, ರಾಯಚೂರು, ಕಲಬುರಗಿಯಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿಲ್ಲ. ದಾವಣಗೆರೆಯಲ್ಲೂ ಈಗ 35 ರಿಂದ 40 ಡಿಗ್ರಿಯಷ್ಟು ತಾಪಮಾನವಿದೆ. ಆದ್ದರಿಂದ ಬೇಸಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.  ನಗರದ ವ್ಯಾಪ್ತಿಯಲ್ಲಿ ಯಾರೂ ಹೆಚ್ಚು ವೇಗವಾಗಿ ವಾಹನ ಚಾಲನೆ ಮಾಡುವುದಿಲ್ಲ. ಊರಿಂದ ಹೊರಗೆ ಹೋಗುವವರಿಗೆ ಕಡ್ಡಾಯ ಮಾಡಲಿ. ಈ ಕುರಿತು ಎಸ್ಪಿ ಉಮಾ ಪ್ರಶಾಂತ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡೋಣ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರೋಣ ಎಂದು ಹೇಳಿದರು.  ವಿಶ್ವ ಕರವೇ ಸಂಘಟನೆಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿ, ಫುಲ್ ಹೆಲ್ಮೆಟ್ ಧರಿಸಿದರೆ ಇತರ ವಾಹನಗಳ ಹಾರ್ನ್ ಶಬ್ದ ಕೇಳಿಸುವುದಿಲ್ಲ. ಅದರಿಂದ ಅಪಘಾತಕ್ಕೆ ಒಳಗಾಗುವ ಸಂದರ್ಭ ಇರುತ್ತದೆ. ಅಲ್ಲದೇ ಹೆಲ್ಮೆಟ್ ಹಾಕಿದರೆ ಕೂದಲು ಉದುರುವ ಸಮಸ್ಯೆಯೂ ಇದೆ ಎಂದು ತಿಳಿಸಿದರು.  ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಮೇ ತಿಂಗಳ ವರೆಗೆ ವಿನಾಯಿತಿ ನೀಡಲಿ, ಮಳೆಗಾಲದಲ್ಲಿ ಕಡ್ಡಾಯ ಮಾಡಲಿ ಎಂದರು. ಕಾಂಗ್ರೆಸ್ ಮುಖಂಡ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಈ ವಿಚಾರವನ್ನು ವಾಹನ ಸವಾರರ ಇಚ್ಛೆಗೆ ಬಿಡಬೇಕು, ಕಡ್ಡಾಯ ಮಾಡಬಾರದು ಎಂದರು.  ಮಹಿಳಾ ಕಾಂಗ್ರೆಸ್‌ನ ಅನಿತಾಬಾಯಿ ಮಾತನಾಡಿ, ಫುಲ್ ಹೆಲ್ಮೆಟ್‌ನಿಂದ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು. ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ್ ಮಾತನಾಡಿ, ಈ ವಿಷಯವನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು, ಯಥಾಸ್ಥಿತಿ ಕಾಪಾಡಬೇಕು ಎಂದರು. ವ್ಯಾಪಾರಸ್ಥರಿಗೆ ಆಗುವ ತೊಂದರೆಯನ್ನು ಕುಂದನ್‌ಮಲ್ ಅವರು ವಿವರಿಸಿದರು.  ಕಾಂಗ್ರೆಸ್ ಮುಖಂಡ ಮೈನುದ್ದೀನ್, ಆಮ್ ಆದ್ಮಿ ಪಾರ್ಟಿ ಮುಖಂಡ ರಾಘವೇಂದ್ರ, ಕೊಟ್ರಯ್ಯ, ತೆರಿಗೆ ಸಲಹೆಗಾರ ಜೆಂಬಗಿ ರಾಧೇಶ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಜಾಕೀರ್ ಇದ್ದರು. ಎ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net