

ದಾವಣಗೆರೆ : ದ್ವಿಚಕ್ರ ವಾಹನ ಸವಾರರಿಂದ ಪೊಲೀಸರು ಹಾಫ್ ಹೆಲ್ಮೆಟ್ ವಶಪಡಿಸಿಕೊಂಡು ಜಾಗೃತಿ ಮೂಡಿಸುವ ಅಭಿಯಾನ ಮುಂದುವರಿದಿದ್ದು ಮೂರು ದಿನಗಳಲ್ಲಿ ಒಟ್ಟು 5 ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ. ಸೋಮವಾರ ನಗರದ ಜಯದೇವ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ದ್ವಿಚಕ್ರ ವಾಹನ ಸವಾರರಿಂದ ಹಾಫ್ ಹೆಲ್ಮೆಟ್‌ಗಳನ್ನು ಪಡೆದುಕೊಂಡು ರಾಶಿ ಹಾಕಿದರು. ಮತ್ತೆ ಕೆಲವು ಸಾರ್ವಜನಿಕರು ತಾವಾಗಿಯೇ ಬಂದು ಹಾಫ್ ಹೆಲ್ಮೆಟ್ ಒಪ್ಪಿಸಿದರು. ಮತ್ತೆ ಕೆಲವರು ಏಕೆ ಹೆಲ್ಮೆಟ್ ಪಡೆಯುತ್ತಿದ್ದೀರಿ ಎಂದು ಕೇಳಿ ತಿಳಿದುಕೊಂಡರು. ಅಂಥವರಿಗೆ ಪೊಲೀಸರು ಅರಿವು ಮೂಡಿಸಿದರು. ನಿರ್ದಿಷ್ಟ ಕಂಪನಿಯ ಹೆಲ್ಮೆಟ್ ಖರೀದಿಸಬೇಕೆ ಎಂಬುದು ಕೆಲವರ ಪ್ರಶ್ನೆಯಾಗಿತ್ತು. ಯಾವುದಾದರೂ ಕಂಪನಿ ಇರಲಿ, ಐಎಸ್‌ಐ ಗುರುತು ಇರಬೇಕು ಎಂದು ಪೊಲೀಸರು ಉತ್ತರಿಸಿದರು. ‘ಹಾಫ್ ಹೆಲ್ಮೆಟ್ ಧರಿಸಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಉಪಯೋಗಿಸಿ. ರಸ್ತೆ ಅಪಘಾತಗಳು ಸಂಭವಿಸಿದಾಗ ತಲೆಗೆ ಪೆಟ್ಟಾದರೆ ಅಪಾಯವಾಗಬಹುದು. ಗುಣಮಟ್ಟದ ಪೂರ್ಣ ಹೆಲ್ಮೆಟ್ ಹಾಕಿದರೆ ಸುರಕ್ಷಿತವಾಗಿರುತ್ತೀರಿ’ ಎಂದು ಅರಿವು ಮೂಡಿಸಲಾಯಿತು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ. ಸಂತೋಷ್ ಮಾತನಾಡಿ, ಎಸ್ಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಂತೆ ಅಭಿಯಾನ ರೂಪದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಎರಡು ದಿನ ಈ ಜಾಗೃತಿ ಕಾರ್ಯಕ್ರಮ ಮುಂದುವರಿಯಲಿದೆ. ಅದಾದ ನಂತರ ದಂಡ ವಿಧಿಸಲಾಗುವುದು ಎಂದು ಹೇಳಿದರು. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವುದರಿಂದ ನಿಮ್ಮ ತಲೆಗೆ ರಕ್ಷಣೆ ಸಿಗುತ್ತದೆ. ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪಘಾತವಾದರೆ ಸಾವು, ನೋವು ಆಗಬಾರದು ಎನ್ನುವ ಕಾರಣಕ್ಕೆ ಒಳ್ಳೆಯ ಹೆಲ್ಮೆಟ್ ಧರಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ತಿಳಿಸಿದರು. ನಗರ ಡಿವೈಎಸ್ಪಿ ಶರಣಬಸವೇಶ್ವರ, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ನಲವಾಗಲು, ಪಿಎಸ್‌ಐಗಳಾದ ಜಯಶೀಲಾ, ಕೆ.ಎನ್. ಶೈಲಜಾ, ಇತರ ಸಿಬ್ಬಂದಿ ಇದ್ದರು.