ತಲಸೀಮಿಯಾ ಪತ್ತೆ, ಚಿಕಿತ್ಸೆಗೆ ಬೇಕಿದೆ ಒತ್ತು

dvg-Dr.-M-B.-Koujalagi.jpg
Published on

ದಾವಣಗೆರೆ :  ತಲಸೀಮಿಯಾ ಹೆಚ್ಚಿರುವ ಪ್ರದೇಶಗಳಲ್ಲಿ ಸರ್ಕಾರ ದಂಪತಿಗಳಿಗೆ ಉಚಿತ ಸ್ಕ್ರೀನಿಂಗ್ ವ್ಯವಸ್ಥೆಗೆ ಒತ್ತು ನೀಡಬೇಕು ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಬಿ. ಕೌಜಲಗಿ ಹೇಳಿದರು.  ವಿಶ್ವ ತಲಸೀಮಿಯಾ ದಿನಾಚರಣೆ ಅಂಗವಾಗಿ ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ‘ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರ’ದಲ್ಲಿ ಮಾತನಾಡಿದರು.  ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನುವಂಶಿಕ ಸಮಾಲೋಚನೆಯ ವ್ಯವಸ್ಥೆಯನ್ನು ಉತ್ತೇಜಿಸುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.  ತಲಸೀಮಿಯಾ ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಜಾಗತಿಕವಾಗಿ ಪ್ರತಿ 10 ಸಾವಿರ ಜೀವಂತ ಜನನಗಳಲ್ಲಿ ಸರಿ ಸುಮಾರು 4.4ರ ಮೇಲೆ ಪರಿಣಾಮ ಬೀರುತ್ತದೆ. ಇದು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಅಡ್ಡಿಪಡಿಸಿ ಲಕ್ಷಾಂತರ ಮಕ್ಕಳು ಜೀವನಪರ್ಯಂತ ರಕ್ತ ವರ್ಗಾವಣೆ ಹಾಗೂ ದುಬಾರಿ ಚಿಕಿತ್ಸೆಗಳ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ. ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಕಡಿಮೆಯಿದೆ ಎಂದರು.  ಮೇ 8ರಂದು ವಿಶ್ವ ತಲಸೀಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ತಲಸೀಮಿಯಾ ದಿನದ ಘೋಷವಾಕ್ಯ ‘ತಲಸೀಮಿಯಾಗಾಗಿ ಒಗ್ಗೂಡುವುದು : ಸಮುದಾಯಗಳನ್ನು ಒಂದುಗೂಡಿಸಿ ರೋಗಿಗಳಿಗೆ ಆದ್ಯತೆ ನೀಡುವುದು’ ಆಗಿದೆ ಎಂದು ಹೇಳಿದರು.  ಆಮ್ಲಜನಕವನ್ನು ಸಾಗಿಸಲು ಕಾರಣವಾದ ಕೆಂಪು ರಕ್ತ ಕಣಗಳಲ್ಲಿನ ಪ್ರಮುಖ ಪ್ರೋಟಿನ್ ಹಿಮೋಗ್ಲೋಬಿನ್ ಉತ್ಪಾದಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಹಿಮೋಗ್ಲೋಬಿನ್ ಅಂಶದ ಉತ್ಪಾದನೆಯು ಕಡಿಮೆಯಾದಾಗ ಅಥವಾ ದೋಷಪೂರಿತವಾದಾಗ ಕೆಂಪು ರಕ್ತ ಕಣಗಳು ಸರಿಯಾಗಿ ಕಾರ್ಯ ನಿರ್ವವಹಿಸುವುದಿಲ್ಲ. ಇದು ರಕ್ತಹೀನತೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಿವರಿಸಿದರು.  ಪಾಲಕರಲ್ಲಿ ಒಬ್ಬರು ಅಥವಾ ಇಬ್ಬರು ದೋಷಯುಕ್ತ ಹಿಮೋಗ್ಲೋಬಿನ್ ಜೀನ್‌ನ್ನು ಆನುವಂಶಿಕವಾಗಿ ಪಡೆದಾಗ ಮಗುವಿನಲ್ಲಿ ತಲಸೀಮಿಯಾ ಸಂಭವಿಸುತ್ತದೆ. ಇಬ್ಬರೂ ಪಾಲಕರು ರೋಗದ ಜೀನ್ ಹೊಂದಿದ್ದರೆ, ಮಗುವಿಗೆ ತೀವ್ರವಾದ ತಲಸೀಮಿಯಾ ಬರುವ ಸಾಧ್ಯತೆ ಶೇ. 25, ವಾಹಕವಾಗುವ ಸಾಧ್ಯತೆ ಶೇ. 50 ಮತ್ತು ಸಾಮಾನ್ಯ ಜೀನ್‌ಗಳನ್ನು ಆನುಂಶಿಕವಾಗಿ ಪಡೆಯುವ ಸಾಧ್ಯತೆ ಶೇ. 25 ರಷ್ಟು ಇರುತ್ತದೆ ಎಂದು ತಿಳಿಸಿದರು.  ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯು ಸತತ 30 ವರ್ಷಗಳಿಂದ ತಲಸೀಮಿಯಾ ಮಕ್ಕಳ ತಪಾಸಣೆ ಹಾಗೂ ಚಿಕಿತ್ಸೆಯಲ್ಲಿ ಮಹತ್ವದ ಸೇವೆ ಸಲ್ಲಿಸುತತ ಬಂದಿದೆ ಎಂದು ಹೇಳಿದರು.  ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞರಾದ ಡಾ. ಬಾಣಾಪುರ ಮಠ್, ಡಾ. ಶೋಭಾ ಬಾಣಾಪುರ ಮಠ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಮೃತ್ಯುಂಜಯ, ಡಾ.ರೇವಪ್ಪ, ಮಕ್ಕಳ ಪಾಲಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net