ಸ್ಥೂಲಕಾಯ ಹಲವು ಕಾಯಿಲೆಗಳ ಮುನ್ನುಡಿ

dvg-health-workshop.jpg
Published on

ದಾವಣಗೆರೆ :  ಸ್ಥೂಲ ಕಾಯವು (ಬೊಜ್ಜು) ದೇಹದ ತೂಕ ಹೆಚ್ಚಳವಷ್ಟೇ ಆಗಿರದೇ ಅನೇಕ ಕಾಯಿಲೆಗಳ ಮುನ್ನುಡಿಯಾಗಿದೆ ಎಂದು ಎಸ್.ಎಸ್. ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ್ ಹೇಳಿದರು.  ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರ’ದಲ್ಲಿ ‘ವಯಸ್ಕರನ್ನು ಕಾಡುವ ಸ್ಥೂಲಕಾಯ, ಅಲಕ್ಷಿಸಿದರೆ ಮಾರಣಾಂತಿಕವಾಗಬಹುದು ಎಚ್ಚರವಿರಲಿ’ ಎಂಬ ವಿಷಯದ ಕುರಿತು ಮಾತನಾಡಿದರು.  ಸ್ಥೂಲ ಕಾಯವು ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕೊಬ್ಬಿನ ಪ್ರಮಾಣ ಸಂಗ್ರಹವಾಗಿರುವ ಸ್ಥಿತಿ. ಇದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.  ಸಾಮಾನ್ಯವಾಗಿ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿಗಳನ್ನು ಸೇವಿಸಿದಾಗ ಬೊಜ್ಜುತನ ಉಂಟಾಗುತ್ತದೆ. ಕೊಬ್ಬಿನಂಶ ಜಾಸ್ತಿ ಇರುವ, ಸಂಸ್ಕರಿಸಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹಾಗೂ ಕಡಿಮೆ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ಬರುತ್ತದೆ.  ನಿತ್ಯ ವ್ಯಾಯಮದ ಕೊರತೆ, ನಡಿಗೆ, ಯೋಗ ಹಾಗೂ ಇತರ ಚಟುವಟಿಕೆಗಳು ಇಲ್ಲದಿರುವುದು. ಕೆಲವು ಸಂದರ್ಭಗಳಲ್ಲಿ ಅನುವಂಶೀಯತೆಯ ಕಾರಣದಿಂದ ಸ್ಥೂಲಕಾಯ ತೊಂದರೆ ಕಾಣಿಸಿಕೊಳ್ಳಬಹುದು. ಥೈರಾಯ್ಡ, ಕುಶಿಂಗ್ಸ್ ಸಿಂಡ್ರೋಮ್ ಇತ್ಯಾದಿ ವೈದ್ಯಕೀಯ ಕಾರಣಗಳಿಂದ ಬರಬಹುದು ಎಂದರು.  ಸ್ಥೂಲಕಾಯದಿಂದ ಗಂಭೀರವಾದ ಆರೋಗ್ಯದ ತೊಂದರೆಗಳು ಉಂಟಾಗುತ್ತವೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ಮುಂತಾದ ಕಾರಣಗಳಿಂದ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಮಧುಮೇಹ, ಸಂಧಿವಾತ, ನಿದ್ರೆಯ ತೊಂದರೆಗಳು ಕಾಣಿಸಿಕೊಳ್ಳಬಹುದು.  ಸಮತೋಲನವಾದ ಆರೋಗ್ಯ ಸೇವನೆ ಮಾಡಬೇಕು. ಕಡಿಮೆ ಕ್ಯಾಲೋರಿ ಇರುವ ತರಕಾರಿ, ಹಣ್ಣು ಸೇವಿಸಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಕಡಿಮೆ ಸಕ್ಕರೆಯ ಅಂಶ ಹಾಗೂ ಅಧಿಕ ಪ್ರೋಟೀನ್ ಸೇವಿಸಬೇಕು. ಪ್ರತಿನಿತ್ಯ 30 ನಿಮಿಷ ನಡೆಯವುದು, ಓಡುವುದು, ಈಜುವುದು ಇತರೆ ದೈಹಿಕ ವ್ಯಾಯಾಮಗಳನ್ನು ಮಾಡಬೇಕು.  ದಿನಕ್ಕೆ 6-8 ಗಂಟೆಗಳಷ್ಟು ನಿದ್ರೆ ಮಾಡಬೇಕು. ಜೀವನ ಶೈಲಿ ಬದಾಲಾವಣೆ ಮಾಡಿಕೊಳ್ಳಬೇಕು. ಧೂಮಪಾನ, ಮದ್ಯಪಾನವನ್ನು ಬಿಡಬೇಕು. ವೈದ್ಯಕೀಯ ಕಾರಣಗಳಿಂದ ಸ್ಥೂಲಕಾಯ ಬಂದಿದ್ದರೆ, ಅದನ್ನು ಸರಿಯಾಗಿ ನಿರ್ವಹಿಸುವುದರಿಂದ ಕಡಿಮೆ ಮಾಡಬಹುದು.  ಇತ್ತೀಚೆಗೆ ಸ್ಥೂಲಕಾಯವನ್ನು ನಿಯಂತ್ರಿಸಲು ಕೆಲವು ಔಷಧಗಳು ಲಭ್ಯವಿದ್ದು, ಅವುಗಳನ್ನು ಕೊನೆಯ ಆಯ್ಕೆಯಾಗಿ ಉಪಯೋಗಿಸಬೇಕು. ಯಾವುದೇ ಔಷಧ ಕೊಟ್ಟರೂ, ರೋಗಿಯು ಮನಸ್ಸು ಮಾಡದಿದ್ದರೆ ಯಾವುದರಿಂದಲೂ ಅಷ್ಟು ಪರಿಣಾಮ ಆಗುವುದಿಲ್ಲ. ಆದ್ದರಿಂದ ಆರೋಗ್ಯಕರ ಜೀವನ ಶೈಲಿಯಿಂದ ಹಾಗೂ ಅಗತ್ಯವಿರುವ ವೈದ್ಯಕೀಯ ನೆರವನ್ನು ಪಡೆಯುವ ಮೂಲಕ ರೋಗವನ್ನು ನಿಯಂತ್ರಿಸಬಹುದು ಎಂದು ಹೇಳಿದರು.  ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಮೃತ್ಯುಂಜಯ, ಡಾ.ರೇವಪ್ಪ, ಮಕ್ಕಳ ಪಾಲಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net