

ದಾವಣಗೆರೆ : ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಗರ್ಭಕೋಶದ ಕೊರಳಿನ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಸ್ತ್ರೀರೋಗ ತಜ್ಞೆ ಡಾ. ಪ್ರೇಮಾ ಪ್ರಭುದೇವ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಗುರುವಾರ ಹಮ್ಮಿಕೊಂಡಿದ್ದ ‘ಎಚ್‌ಪಿವಿ ಲಸಿಕೆ ಗರ್ಭಕೋಶದ ಕ್ಯಾನ್ಸರ್ ನಿವಾರಣೆಯಲ್ಲಿ ದಶಕದ ಆವಿಷ್ಕಾರ’ ವಿಷಯ ಕುರಿತು ಮಾತನಾಡಿದರು. ಗರ್ಭಕೋಶದ ಕೊರಳಿನ ಕ್ಯಾನ್ಸರ್‌ನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಪ್ರತಿವರ್ಷ 1.23ಲಕ್ಷ ಮಹಿಳೆಯರಲ್ಲಿ (ಶೇ.21) ಈ ಕಾಯಿಲೆ ಪತ್ತೆಯಾಗುತ್ತಿದೆ. ಈ ಪೈಕಿ ಸುಮಾರು 77 ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದರು. 16 ವರ್ಷಕ್ಕಿಂತ ಮುಂಚಿತವಾಗಿ ವಿವಾಹವಾಗಿದ್ದರೆ, ಪದೇ ಪದೆ ಗರ್ಭಧರಿಸಿದ್ದರೆ, ಐದಕ್ಕಿಂತ ಹೆಚ್ಚು ಮಕ್ಕಳಾಗಿದ್ದರೆ, ಜನನಾಂಗದ ಸ್ವಚ್ಛತೆ ಕಾಪಾಡದಿದ್ದರೆ, 5 ವರ್ಷಕ್ಕಿಂತ ಹೆಚ್ಚು ಸಮಯ ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದರೆ ಹಾಗೂ ವಿಟಮಿನ್ ಕೊರತೆ ಇದ್ದರೆ ಹಾಗೂ ಎಚ್‌ಪಿವಿ ಸೋಂಕು ಇರುವ ಮಹಿಳೆಯರಲ್ಲಿ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದರು. ಎಚ್‌ಪಿವಿ ಸೋಂಕು ತಡೆಗಟ್ಟಲು ಎಚ್‌ಪಿಐ ಲಸಿಕೆ ಲಭ್ಯವಿದ್ದು, 9ರಿಂದ 14 ವರ್ಷ ವಯಸ್ಸಿನವರಿಗೆ 6 ತಿಂಗಳ ಅಂತರದಲ್ಲಿ 2 ಲಸಿಕೆ ಹಾಕಿಸಬೇಕು. 14 ವರ್ಷದ ನಂತರ ಆದರೆ (45 ವರ್ಷದೋಳಗಾಗಿ) 3 ಲಸಿಕೆ, ಮೊದಲ ಡೋಸ್‌ನ ನಂತರ 2 ತಿಂಗಳು ಮತ್ತು 6 ತಿಂಗಳುಗಳ ಅಂತರದಲ್ಲಿ ಪಡೆಯಬೇಕು ಎಂದು ಹೇಳಿದರು. ಹದಿಹರೆಯದ 9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಈ ವಯಸ್ಸಿನ ಎಲ್ಲ ಹೆಣ್ಣುಮಕ್ಕಳು ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜಿಸಬೇಕಿದೆ. ಆದರೆ, ಗರ್ಭಣಿಯರು ಲಸಿಕೆ ಪಡೆಯುವಂತಿಲ್ಲ. ಹಾಲುಣಿಸುವ ಬಾಣಂತಿಯರು ಲಸಿಕೆ ಪಡೆಯಬಹುದು ಎಂದರು. ಆಸ್ಪತ್ರೆ ನಿರ್ದೇಶಕರಾದ ಡಾ.ಗುರುಪ್ರಸಾದ್, ಡಾ.ಬಾಣಪುರಮಠ್, ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ. ಬಸಂತ್‌ಕುಮಾರ್, ಡಾ. ರೇವಪ್ಪ ಇದ್ದರು.