ಸ್ತನ್ಯಪಾನ ಮಗುವಿನ ಸ್ವಾಸ್ಥೃದ ಸೋಪಾನ

Dr.G.S.-Latha-1.jpg
Published on

ದಾವಣಗೆರೆ : ತಾಯಿ ಹಾಲು ಸೇವನೆಯು ನವಜಾತ ಶಿಶುವಿನ ಆರೋಗ್ಯಕರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಎಸ್.ಎಸ್. ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಜಿ.ಎಸ್. ಲತಾ ಹೇಳಿದರು.  ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಸ್ತನ್ಯಪಾನದ ಅಂತರವನ್ನು ಕಡಿಮೆಗೊಳಿಸಿ, ತಾಯಿ ಹಾಲುಣಿಸಲು ಪ್ರೋತ್ಸಾಹಿಸಿ’ ವಿಷಯದ ಕುರಿತು ಉಪನ್ಯಾಸ ನೀಡಿದರು.  ತಾಯಿ ಹಾಲು ಮಗುವಿಗೆ ಸಂಪೂರ್ಣವಾದ ಆಹಾರವಾಗಿದ್ದು ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಶಿಶುಗಳ ಆರೋಗ್ಯಕರವಾದ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ಪ್ರೋಟೀನ್, ಕೊಬ್ಬಿನಂಶಗಳು ಸೇರಿವೆ ಎಂದು ತಿಳಿಸಿದರು.  ಮಕ್ಕಳ ರೋಗನಿರೋಧಕ ಶಕ್ತಿಯನ್ನು ತಾಯಿ ಹಾಲು ಹೆಚ್ಚಿಸುತ್ತದೆ. ಅತಿಸಾರ, ಶೀತ, ಕಫ ಮತ್ತು ಇತರೆ ಬ್ಯಾಕ್ಟೀರಿಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡ ರಕ್ಷಣೆ ಸಿಗುತ್ತದೆ. ಸಕ್ಕರೆ, ಬಿ.ಪಿ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.  ಹಸುವಿನ ಹಾಲಿಗಿಂತ ತಾಯಿಯ ಹಾಲು ಬೇಗ ಜೀರ್ಣವಾಗುತ್ತದೆ. ಮಗುವಿನ ಮಿದುಳಿನ ಬೆಳವಣಿಗೆಗೂ ಸಹಕಾರಿಯಾಗಿದ್ದು ಚುರುಕುತನ, ಬುದ್ಧಿಮಟ್ಟ ಹೆಚ್ಚಾಗುವಂತೆ ಮಾಡುತ್ತದೆ ಎಂದರು.  ತಾಯಿ ಹಾಲು ತಾಜಾತನದಿಂದ ಕೂಡಿರುತ್ತದೆ, ಯಾವುದೇ ರೀತಿಯ ಕಲಬೆರಕೆ ಸಾಧ್ಯವಿಲ್ಲ, ಆದ್ದರಿಂದ ಇದು ಸುರಕ್ಷಿತವೂ ಹೌದು.  ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆ ನಿವಾರಣೆ ಸ್ತನ್ಯಪಾನದಿಂದ ಸಾಧ್ಯ ಎಂದು ಹೇಳಿದರು.  ತಾಯಿಯ ಆರೋಗ್ಯಕ್ಕೂ ಇದು ಬಹಳ ಮುಖ್ಯವಾಗಿದೆ. ಹೆರಿಗೆಯ ನಂತರ ತೂಕ ಕಡಿಮೆ ಮಾಡಲು ಸಹಾಯಕವಾಗುತ್ತದೆ. ತಾಯಿ ಮತ್ತು ಮಗುವಿನ ಬಾಂಧವ್ಯ ಬೆಳೆಯಲು ಅನುಕೂಲವಾಗುತ್ತದೆ. ಹೆರಿಗೆ ನಂತರ ಹಾಲುಣಿಸುವುದರಿಂದ ತಾಯಂದಿರಲ್ಲಿ ರಕ್ತಸ್ರಾವವನ್ನು ಕಡಿಮೆ ಮಾಡಿ ಮರಣವನ್ನು ತಪ್ಪಿಸಲು ಸಹಾಯಕವಾಗುತ್ತದೆ. ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ವಿವರಿಸಿದರು.  ಸ್ತನ್ಯಪಾನ ಆರ್ಥಿಕವಾಗಿಯೂ ಪ್ರಯೋಜನಕಾರಿ. ತಾಯಂದಿರಿಗೆ ಶಿಶು ಪೋಷಣೆಗೆ ಬೇಕಾದ ಖರ್ಚು ಕಡಿಮೆಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎದೆಹಾಲು ಕುಡಿಯುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು.  ಪ್ಯಾಕೇಜಿಂಗ್, ಮಾರಾಟ ಅಥವಾ ತಯಾರಿಕೆಯ ಅಗತ್ಯವಿಲ್ಲದ ಕಾರಣ ತಾಯಿ ಹಾಲು ಪರಿಸರಸ್ನೇಹಿ. ಮಗುವಿಗೆ ಯಾವಾಗ, ಎಲ್ಲಿ ಬೇಕಾದರೂ ಸಿಗುತ್ತದೆ ಎಂದರು.  ಆಗಸ್ಟ್ 1 ರಿಂದ 7 ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ತಾಯಂದಿರನ್ನು ತಮ್ಮ ಶಿಶುಗಳಿಗೆ ಸ್ತನ್ಯಪಾನ ಮಾಡಿಸಲು ಪ್ರೇರೇಪಿಸುವುದು, ತಾಯಿ ಹಾಲಿನ ಮಹತ್ವವನ್ನು ತಿಳಿಸುವುದು, ಸ್ತನ್ಯಪಾನ ಕುರಿತಾದ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net