ಜೀವನ ಶೈಲಿ ಬದಲಾವಣೆಯಿಂದ ಬೆನ್ನು ನೋವಿಗೆ ಮುಕ್ತಿ

dvg-karyagara-june-4.jpg
Published on

ದಾವಣಗೆರೆ :  ಜೀವನ ಶೈಲಿಯಲ್ಲಿನ ಬದಲಾವಣೆ, ಸಮತೋಲಿತ ಆಹಾರ ಮತ್ತು ಪ್ರತಿ ನಿತ್ಯ ನಿಯಮಿತ ವ್ಯಾಯಾಮದಿಂದ ಬೆನ್ನು ನೋವು ಬರದಂತೆ ನೋಡಿಕೊಳ್ಳಬಹುದು ಎಂದು ಜೆಜೆಎಂ ವೈದ್ಯಕೀಯ ಮಹಾ ವಿದ್ಯಾಲಯದ ಕೀಲುಮೂಳೆ ವಿಭಾಗದ ಪ್ರಾಧ್ಯಾಪಕ ಡಾ. ಜೆ. ರಘುಕುಮಾರ್ ಹೇಳಿದರು.  ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ  ನಡೆದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ವಯಸ್ಕರನ್ನು ಕಾಡುವ ಬೆನ್ನುನೋವು- ಕಾರಣ-ಚಿಕಿತ್ಸೆ ಮತ್ತು ಪರಿಹಾರ’ ವಿಷಯ ಕುರಿತು ಮಾತನಾಡಿದರು.  ಬೆನ್ನುನೋವು ಅತಿ ಸಾಮಾನ್ಯವಾದ ಆರೋಗ್ಯ ಸಮಸ್ಯೆ. ಅದು ಬರದಂತೆ ನೋಡಿಕೊಳ್ಳುವುದು ಮುಖ್ಯ. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಬೆನ್ನು ನೋವು ಹತ್ತಿರ ಸುಳಿಯುವುದಿಲ್ಲ. ದೈಹಿಕ ವ್ಯಾಯಾಮ ಮಾಡುವುದರಿಂದ, ಸಮತೋಲಿತ ಆಹಾರ ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದರು.  ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಲ್ಲೂ ಬೆನ್ನು ನೋವಿನ ಸಮಸ್ಯೆ ಕಂಡು ಬರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಅನೇಕ ಕಾರಣಗಳಿಂದ ಅದನ್ನು ಅನುಭವಿಸಬೇಕಾಗುತ್ತದೆ. ಮುಂಜಾಗ್ರತೆಯೇ ಸೂಕ್ತ ಪರಿಹಾರ ಎಂದು ತಿಳಿಸಿದರು.  ಬೆನ್ನು ತಲೆಯ ಭಾರವನ್ನು ಹೊತ್ತು ಹೊಟ್ಟೆಯ ತೂಕವನ್ನು ಕಾಲುಗಳಿಗೆ ರವಾನಿಸುತ್ತದೆ. ಬೆನ್ನು ನಮ್ಮೆಲ್ಲರ ಭಾವ ಭಂಗಿಯನ್ನು ಕಾಪಾಡಿ ಬಾಗಿಸುವಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.  ಬೆನ್ನು ನೋವಿಗೆ ನೂರಾರು ಕಾರಣಗಳಿವೆ. ಮಾಂಸ ಖಂಡಗಳ ಮೇಲಿನ ಒತ್ತಡ ಅಥವಾ ಸೆಳೆತ ಸಾಮಾನ್ಯ ಕಾರಣವಾಗಿದೆ. ಬೆನ್ನಿನ ರಚನಾತ್ಮಕ ಅಥವಾ ಜನ್ಮಜಾತ ತೊಂದರೆಗಳು, ಅನುಚಿತ ಭಂಗಿ, ಮೂಳೆ ಸವೆತ, ಸಂವಾತ, ಔದ್ಯೋಗಿಕ ಮತ್ತು ಸೋಂಕು ಬೆನ್ನುನೋವಿಗೆ ಕಾರಣವಾಗಬಹುದು. ಇದಕ್ಕೆ ಕೆಲವೊಂದು ಪೂರಕವಾದ ಕಾರಣಗಳೂ ಇವೆ. ಜಡ ಜೀವನಶೈಲಿ, ಮದ್ಯಪಾನ, ಧೂಮಪಾನ, ವಯೋಮಾನ, ಶಾರೀರಿಕ ಬೊಜ್ಜು ಮುಖ್ಯ ಕಾರಣಗಳು ಎಂದು ತಿಳಿಸಿದರು.  ಬೆನ್ನುನೋವು ಕಾಣಿಸಿಕೊಂಡಲ್ಲಿ ರೋಗ ಲಕ್ಷಣದ ಇತಿಹಾಸ, ದೈಹಿಕ ಪರೀಕ್ಷೆ, ಕ್ಷ-ಕಿರಣ, ಎಂಆರ್‌ಐ ಇತರೆ ಪರೀಕ್ಷೆಗಳಿಂದ ದೃಢ ಪಡಿಸಿಕೊಳ್ಳಲಾಗುತ್ತದೆ. ಕಾರಣಗಳನ್ನು ಹುಡುಕಿ ಸೂಕ್ತ ಚಿಕಿತ್ಸೆ ಒದಗಿಸಬಹುದು. ಇಂದಿನ ಆಧುನಿಕ ವೈದ್ಯಕೀಯ ಯುಗದಲ್ಲಿ ಔಷಧ ಮತ್ತು ಶಸ್ತ್ರಚಿಕಿತ್ಸೆಯ ಮೂಲಕವೂ ಬೆನ್ನುನೋವನ್ನು ನಿವಾರಣೆ ಮಾಡಬಹುದು ಎಂದು ವಿವರಿಸಿದರು.  ಯಾವುದೇ ವಯಸ್ಸಿನವರಾದದರೂ ಸರಿ ಬೆನ್ನುನೋವನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಲೇಬಾರದು. ವೈದ್ಯರನ್ನು ಸಂಪರ್ಕಿಸಿ, ಸಲಹೆ, ಚಿಕಿತ್ಸೆ ಪಡೆಯುವುದು ಸೂಕ್ತ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.  ಕೇಂದ್ರದ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಡಾ. ಸುರೇಶ್ ಬಾಬು, ಡಾ. ಕೌಜಲಗಿ, ಡಾ. ಮೃತ್ಯುಂಜಯ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net