ರೇಣುಕಾಚಾರ್ಯ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

B-P-HARISH-EX-MLA-BJP.jpg
Published on

ದಾವಣಗೆರೆ : ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪಕ್ಷ ವಿರೋಧಿ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿಯ ರಾಜ್ಯ ನಾಯಕರು ಎಚ್ಚರಿಕೆ ನೀಡಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.
 ರೇಣುಕಾಚಾರ್ಯ ಇತ್ತೀಚೆಗೆ ನೀಡುತ್ತಿರುವ ಕೆಲವು ಹೇಳಿಕೆಗಳಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು, ಜಿಲ್ಲೆಯಿಂದ ಬೆಂಗಳೂರಿಗೆ ತೆರಳಿದ್ದ ಪಕ್ಷದ 40 ಜನ ಮುಖಂಡರ ನಿಯೋಗ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಜಿಲ್ಲೆಯ ಉಸ್ತುವಾರಿ ಪ್ರೀತಂ ಗೌಡ ಅವರ ಗಮನಕ್ಕೆ ತಂದಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
 ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ‘ಜಿಲ್ಲೆಯವರು’, ‘ಹೊರಗಿನವರು’ ಎಂಬ ಹೇಳಿಕೆಗಳನ್ನು ಅವರು ಮಾಧ್ಯಮಗಳ ಮೂಲಕ ನೀಡಿದ್ದಾರೆ. ಈ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಮುಜುಗರವಾಗುತ್ತಿದೆ ಎಂದು ವರಿಷ್ಠರಿಗೆ ಮನದಟ್ಟು ಮಾಡಿದ್ದಾಗಿ ಹೇಳಿದರು.
 ನಿಯೋಗದ ದೂರನ್ನು ಆಲಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ರೇಣುಕಾಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ ಇದೇ ವರ್ತನೆ ಮುಂದುವರಿದರೆ ಪಕ್ಷದಿಂದ ಉಚ್ಚಾಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾಗಿ ತಿಳಿಸಿದರು.
 ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಸಿದ್ದೇಶ್ವರ 8 ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅಂಥವರ ಮೇಲೆ ಆರೋಪ ಮಾಡುವ ನೈತಿಕತೆ ಅವರಿಗಿಲ್ಲ ಎಂದರು.
 ಸಿದ್ದೇಶ್ವರ ಅವರ ಗ್ರಾಮವು ಈ ಹಿಂದೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಅವರ ನಿವಾಸ, ವಿದ್ಯಾಸಂಸ್ಥೆಗಳು ದಾವಣಗೆರೆಯಲ್ಲೇ ಇವೆ. ಕ್ಷೇತ್ರದ 2 ಸಾವಿರ ಗ್ರಾಮಗಳಿಗೆ ಸಿದ್ದೇಶ್ವರ ಅನೇಕ ಬಾರಿ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.
 ಲೋಕಸಭಾ ಚುನಾವಣೆಗೆ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಕುರಿತು ಕೇಂದ್ರದ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರಿಗೇ ಟಿಕೆಟ್ ನೀಡಿದರೂ ದೇಶ, ಧರ್ಮ, ಸಂಸ್ಕೃತಿ ಉಳಿಸಲು, ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
 ಪಕ್ಷ ವಿರೋಧಿ ಚಟುವಟಿಕೆ ಮಾಡುವ ಯಾವುದೇ ನಾಯಕರಿಗೆ ಕಾರ್ಯಕರ್ತರು ಸಹಕರಿಸಬಾರದು. ಮೋದಿ ಮತ್ತೆ ಪ್ರಧಾನಿಯಾಗಬೇಕು, ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದಷ್ಟೇ ನಮ್ಮ ಗುರಿ ಎಂದು ತಿಳಿಸಿದರು.
 ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ಮನೆಗೆ ಹೋಗಿ ಮಾಧ್ಯಮದವರ ಜತೆಗೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದವರ ವಿಶ್ವಾಸ ಗಳಿಸುವುದು ಅವರ ಉದ್ದೇಶವೆ ಎಂದು ಪ್ರಶ್ನಿಸಿದರು.
 ಒಂದು ಕಡೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಇನ್ನೊಂದು ಕಡೆ ರೇಣುಕಾಚಾರ್ಯ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ, ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದರು.
 ಪಕ್ಷದ ಮುಖಂಡರಾದ ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಪಾಟೀಲ್, ಹನುಮಂತನಾಯ್ಕ, ಟಿಂಕರ್ ಮಂಜಣ್ಣ, ಜಿ.ವಿ. ಗಂಗಾಧರ, ವಿಶ್ವಾಸ್ ಇದ್ದರು.
 ...

 * ಬೀದಿಗೆ ಇಳಿಯಬೇಕಾದೀತು
 ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಪಕ್ಷವಿರೋಧಿ ಹೇಳಿಕೆ ನೀಡುವುದನ್ನು ರೇಣುಕಾಚಾರ್ಯ ಮುಂದುವರಿಸಿದರೆ ರಾಜ್ಯ ಬಿಜೆಪಿ ಕಚೇರಿ ಮುಂದೆ ಧರಣಿ ಮಾಡುವುದಾಗಿ ತಿಳಿಸಿದರು.
 ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯಗೆ ಸಿದ್ದೇಶ್ವರ ಅವರೇ ಬಿ ಫಾರಂ ಕೊಡಿಸಿದ್ದಾರೆ. ಆಗ ಅವರ ಕಾಲಿಗೆ ಬೀಳಲು ಹೋಗಿದ್ದು ನೆನಪಿಲ್ಲವೆ? ಅಧಿಕಾರದ ತೆವಲಿಗಾಗಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಇದರ ಹಿಂದೆ ಕಾಂಗ್ರೆಸ್‌ನವರ ಕುಮ್ಮಕ್ಕಿದೆ ಎಂದು ಹೇಳಿದರು.
 ರೇಣುಕಾಚಾರ್ಯಗೆ ಅನ್ಯಾಯವಾಗಿದ್ದರೆ ಪಕ್ಷದ ವೇದಿಕೆಗಳಲ್ಲಿ ಹೇಳಿಕೊಳ್ಳಲಿ. ಅದರ ಬದಲು ಪದೇ ಪದೇ ಮಾಧ್ಯಮಗಳ ಮುಂದೆ ಹೋಗಿ ಇಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಿಳಿಸಿದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net