

ಹರಿಹರ : ನಗರದಲ್ಲಿ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಮೂಲಸೌಕರ್ಯಗಳು ಸಂಪೂರ್ಣವಾಗಿ ಹದಗೆಟ್ಟಿವೆ. ರಸ್ತೆ, ಕುಡಿಯುವ ನೀರು, ಚರಂಡಿ, ಪಾರ್ಕ್, ಸಂತೆ ಮಾರುಕಟ್ಟೆ, ಫುಟ್‌ಪಾತ್, ಶುದ್ಧ ಕುಡಿಯುವ ನೀರಿನ ಘಟಕ, ಬೀದಿ ನಾಯಿಗಳ ಹಾವಳಿ ಇಂತಹ ಮೂಲ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿದರು. ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಿ ನಿಗದಿತ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು. ನಿರ್ಲಕ್ಷ್ಯ ಮಾಡಿದರೆ ಸಂಘದಿಂದ ನಗರಸಭೆ ಮುಂಭಾಗದಲ್ಲಿ ಧರಣಿ ಮಾಡಲಾಗುವುದು ಎಂದರು. ತಾಲೂಕು ಅಧ್ಯಕ್ಷ ವೈ. ರಮೇಶ್ ಮಾನೆ, ನಗರ ಘಟಕ ಅಧ್ಯಕ್ಷ ಪ್ರೀತಮ್ ಬಾಬು, ಗೌರವಾಧ್ಯಕ್ಷ ಸಿದ್ದಪ್ಪ, ಬಿ. ಮುಗ್ದಮ್, ವಕೀಲ ಹಾಲೇಶ್, ಪದಾಧಿಕಾರಿಗಳಾದ ಅಲಿ ಅಕ್ಟರ್, ರಾಮು, ರಾಜು ಬಾವಿಕಟ್ಟಿ, ಜಮೀರ್, ಚಂದ್ರಣ್ಣ ಮೇದಾರ್, ಗೋಪಿನಾಥ್, ಗಣೇಶ್, ಗಿರೀಶ್ ಇದ್ದರು.