

ದಾವಣಗೆರೆ : ಅಂಗವಿಕಲರು ಜೀವನದಲ್ಲಿ ಶಕ್ತಿ ಮತ್ತು ಧೈರ್ಯವನ್ನು ಹೊಂದಿ ಆತ್ಮವಿಶ್ವಾಸದಿಂದ ಬದುಕಲು ಸರ್ಕಾರ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಅಂಗವಿಕಲರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣ ಉದ್ದೇಶದ ಇಲ್ಲಿನ ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ಸೋಮವಾರ, ಅಂಗನವಾಡಿ ಶಿಕ್ಷಕಿಯರಿಗಾಗಿ ಆಯೋಜಿಸಿದ್ದ ಪೂರ್ವಭಾವಿ ಮಧ್ಯಸ್ಥಿಕೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಸಿಆರ್‌ಸಿ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರತಿಷ್ಠಿತ ಸಂಸ್ಥೆಯಾಗಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಇರುವ ಭಾರತ ಸರ್ಕಾರದ ಈ ಕೇಂದ್ರವು, 21 ವಿಧದ ಅಂಗವಿಕಲರ ಅಗತ್ಯಗಳನ್ನು ನೋಡಿಕೊಳ್ಳುತ್ತಿದೆ. ಮಕ್ಕಳು ಯಾವುದೇ ರೀತಿಯ ಅಂಗವಿಕಲತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪ್ರಯೋಜನ ಪಡೆಯಲು ಸಿಆರ್‌ಸಿಗೆ ಭೇಟಿ ನೀಡುವಂತೆ ಅವರಿಗೆ ತಿಳಿಸಬೇಕು ಎಂದು ಅಂಗನವಾಡಿ ಶಿಕ್ಷಕರಿಗೆ ಸೂಚಿಸಿದರು. ಸಿಆರ್‌ಸಿ ಎಲ್ಲ ರೀತಿಯ ತಜ್ಞ ಸಿಬ್ಬಂದಿಯನ್ನು ಹೊಂದಿದೆ. ನೀವು ಮಗುವಿನಲ್ಲಿ ಯಾವುದೇ ಅಂಗವೈಕಲ್ಯವನ್ನು ಗುರುತಿಸಿದರೆ, ಅದನ್ನು ಗುಣಪಡಿಸಬಹುದು ಮತ್ತು ಸಿಆರ್‌ಸಿಯು ಅವರನ್ನು ಸಾಮಾನ್ಯ ಸ್ಥಿತಿಗೆ ತರಲು ಶ್ರಮಿಸುತ್ತದೆ ಎಂದು ತಿಳಿಸಿದರು. ಇದೇ ವೇಳೆ ಅವರು ಅಂಗನವಾಡಿ ಶಿಕ್ಷಕರಿಗೆ ಆರಂಭಿಕ ಮಧ್ಯಸ್ಥಿಕೆ ಜಾಗೃತಿ ಮೂಡಿಸುವ ಕಿಟ್‌ಗಳ ವಿತರಣೆ ಹಾಗೂ ವಿವಿಧ ಅಂಗವಿಕಲರಿಗೆ 120 ಸಹಾಯಕ ಸಾಧನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ 70 ಕ್ಕೂ ಹೆಚ್ಚಿನ ಫಲಾನುಭವಿಗಳು ವಿವಿಧ ಬಗೆಯ ಸಹಾಯಕ ಸಾಧನಗಳನ್ನು ಪಡೆದುಕೊಂಡರು. ನಂತರ ಸಿಆರ್‌ಸಿಯಿಂದ ನೀಡಲಾಗುವ ಸವಲತ್ತುಗಳು, ಸೇವೆಗಳನ್ನು ವಿತರಿಸಿದರು. ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು. ಸಿಆರ್‌ಸಿ ನಿರ್ದೇಶಕಿ ಮೀನಾಕ್ಷಿ ಮಾತನಾಡಿ, ಬಿಪಿಎಲ್ ವರ್ಗದವರಿಗೆ ಮತ್ತು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಅಗತ್ಯವಿರುವ ಎಲ್ಲ ಸಹಾಯ ಮತ್ತು ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. 21 ವಿಧದ ಅಂಗವಿಕಲರಿಗೆ ಪುನರ್ವಸತಿ, ಸಮಾಲೋಚನೆ, ಚಿಕಿತ್ಸೆ, ಉದ್ಯೋಗ ಕೌಶಲಗಳ ತರಬೇತಿ ಇತ್ಯಾದಿ ಸೇವೆ ನೀಡಲಾಗುತ್ತಿದೆ. ರಾಜ್ಯದ ಜನರು ಈ ಸೌಲಭ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ವಿನಂತಿಸಿದರು. ಸಿಆರ್‌ಸಿ ಆಡಳಿತಾಧಿಕಾರಿ ವೈ. ಶ್ರೀನಾಥ್, 275 ಜನ ಅಂಗನವಾಡಿ ಶಿಕ್ಷಕರು, ಅಂಗವಿಕಲರು, ಅವರ ಬಂಧುಗಳು, ಸಿಆರ್‌ಸಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ 500 ಜನ ಭಾಗವಹಿಸಿದ್ದರು.