

ದಾವಣಗೆರೆ : ಅಂಗವಿಕಲರ ಆರೈಕೆ ಮಾಡಲು ಮಾನಸಿಕ ಶಾಂತತೆ, ಏಕಾಗ್ರತೆ, ಬದ್ದತೆಗಾಗಿ ಪ್ರತಿದಿನ ಯೋಗ, ಧ್ಯಾನ, ಮನರಂಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್ ಹೇಳಿದರು.
ನಗರದ ಅಂಗವಿಕಲರ ಆಶಾಕಿರಣ ಟ್ರಸ್ಟ್‌ನ ಬುದ್ಧಿಮಾಂಧ್ಯ ಮಕ್ಕಳ ಭಾವೈಕ್ಯತೆ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಆರೈಕೆದಾರರು ಎಲ್ಲ ವಿಧದ ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬುವ ಜತೆಗೆ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಮಾನಸಿಕವಾಗಿ ಸಶಕ್ತರಾಗಿದ್ದಾಗ ಮಾತ್ರ ತೀವ್ರತರ ನ್ಯೂನತೆಯ ಅಂಗವಿಕಲರಿಗೆ ಆರೈಕೆ ಮಾಡಲು ಸಾಧ್ಯ ಎಂದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಾ. ಕೆ.ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಅಂಗವಿಕಲರ ಅಭಿವೃದ್ಧಿಗೆ ಹಲವು ಯೋಜನೆ ಅನುಷ್ಠಾನಗೊಳಿಸುವ ಜತೆಗೆ ಆರೈಕೆದಾರರಿಗೂ ಸ್ವಾಸ್ಥ್ಯ ಜೀವನ ನಡೆಸಲು ಪೋಷಕ ಭತ್ಯೆ ಸೇರಿ ಅನೇಕ ಯೋಜನೆ ಜಾರಿಗೊಳಿಸಿದೆ. ಇವುಗಳನ್ನು ಪಡೆದು ಸ್ವಾಸ್ಥ್ಯ ಜೀವನ ನಡೆಸಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಇಲಾಖೆ ಮನೋವೈದ್ಯ ಡಾ. ಎಂ.ಸಂತೋಷ್‌ಕುಕುಮಾರ್ ಮಾತನಾಡಿ, ಜೀವನ ಕೌಶಲ ಅಳವಡಿಸಿಕೊಂಡಾಗ ಮಾತ್ರ ಸಮಸ್ಯೆ ಎದುರಿಸಲು ಸಾಧ್ಯ ಎಂದರು. ಅಂಗವಿಕಲರ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರಮಣ್ಚಂದ್, ಆರ್.ಪಿ.ಡಿ. ಟಾಸ್ಕ್‌ಪೋರ್ಸ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ವಿಕಲಚೇತನರ ಇಲಾಖೆ ಜಿಲ್ಲಾ ಸಂಯೋಜಕ ನಾಗರಾಜ್ ಇತರರು ಇದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಪಿಡಿ ಸಂಸ್ಥೆ, ಅಂಗವಿಕಲರ ಆಶಾಕಿರಣ ಟ್ರಸ್ಟ್, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ, ಮಾನಸಧಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ ಮತ್ತು ಆರೈಕೆದಾರರ ಗುಂಪು ಇವರ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.