

ದಾವಣಗೆರೆ : ಜಿಲ್ಲಾದ್ಯಂತ ಗುರುವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರಮುಖ ದೇವಸ್ಥಾನ, ಮಠ ಮಂದಿರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ವಿವಿಧ ಸೇವೆಗಳು ನಡೆದವು. ಭಕ್ತರು ದೇಗುಲಗಳಿಗೆ ತೆರಳಿ ದರ್ಶನ ಪಡೆದರು. ನಗರದ ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಗಿನ ಜಾವ 4 ಗಂಟೆಗೆ ಕಾಕಡಾರತಿಯೊಂದಿಗೆ ಧಾರ್ಮಿಕ ಆಚರಣೆಗಳು ಆರಂಭವಾದವು. ಮಂದಿರದಲ್ಲಿರುವ ಬೆಳ್ಳಿ ಮೂರ್ತಿಗೆ ಭಕ್ತರು ಕ್ಷೀರಾಭಿಷೇಕ ಮಾಡಿದರು. ದೀಪಾರಾಧನೆ, ಗೋಪುರ ಧ್ವಜಾರೋಹಣ, ಶ್ರೀ ಸಾಯಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಮಧ್ಯಾಹ್ನಾರತಿ, ಸಂಜೆ ಧೂಪಾರತಿ, ರಾತ್ರಿ ಪಲ್ಲಕ್ಕಿ ಉತ್ಸವ ಮತ್ತು ಶೇಜಾರತಿ ಮಾಡಲಾಯಿತು. ದರ್ಶನಕ್ಕಾಗಿ ಭಕ್ತರು ಬೆಳಗ್ಗೆಯಿಂದ ಸಾಲುಗಟ್ಟಿ ನಿಂತಿದ್ದರು. ಶ್ರೀ ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ, ಉದ್ಯಮಿಗಳಾದ ಎಸ್.ಎಸ್. ಗಣೇಶ್, ಅಥಣಿ ವೀರಣ್ಣ ಪಾಲ್ಗೊಂಡಿದ್ದರು. ನಗರದ ಕೆಬಿ ಬಡಾವಣೆ ರಾಯರ ಮಠದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಂಜೆ ರಥೋತ್ಸವ ನೆರವೇರಿಸಲಾಯಿತು. ಪಿ.ಜೆ. ಬಡಾವಣೆ ರಾಯರ ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ನಗರದ ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲೂ ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.