ಗ್ಯಾರಂಟಿ ಯೋಜನೆ ಬಗ್ಗೆ ಬೇಡ ಊಹಾಪೋಹ

dvg-guarantee-meeting.jpg
Published on

ದಾವಣಗೆರೆ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಹೇಳಿದರು.  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಡಿಸೆಂಬರ್ ತಿಂಗಳ ಗೃಹಲಕ್ಷ್ಮೀ ಹಣವನ್ನು ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಜನವರಿ ತಿಂಗಳಿನ ಗೃಹಲಕ್ಷ್ಮೀ ಹಣ ಪಾವತಿ ಹಂತದಲ್ಲಿದೆ. ನಂತರದ ಬಾಕಿ ಹಣ ಕೂಡ ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಫೆಬ್ರವರಿ ತಿಂಗಳ ಹಣವೂ ಬಿಡುಗಡೆಯಾಗಲಿದೆ. ಆದ್ದರಿಂದ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.  ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಾಲಕಾಲಕ್ಕೆ ಇ-ಜನ್ಮ ತಂತ್ರಾಂಶದಲ್ಲಿ, ಮರಣ ಹೊಂದಿದ ಫಲಾನುಭವಿಗಳ ವಿವರ ಪರೀಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.  ಸರ್ಕಾರದಿಂದ ಅನುಷ್ಠಾನಗೊಂಡ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಯೋಜನೆಗಳ ಸೌಲಭ್ಯದ ದುರುಪಯೋಗವಾಗದಂತೆ ನಿಗಾ ವಹಿಸಬೇಕು.  ನಗರದ 36ನೇ ವಾರ್ಡಿನ ಶಿವಕುಮಾರ ಬಡಾವಣೆಗೆ ನಗರ ಸಾರಿಗೆ ಸಂಪರ್ಕ ಇಲ್ಲವಾದ್ದರಿಂದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಈ ಮಾರ್ಗಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಹರಿಹರ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತಿದ್ದು, ಅದೂ ಕೂಡ ಸರಿಯಾದ ಸಮಯಕ್ಕೆ ಬಾರದೇ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾಗಳಿಗೆ ತಿಳಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿ ಶೀಘ್ರದಲ್ಲೇ ಸಾರಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.  ಜಿ.ಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ, ನಂಜಾನಾಯ್ಕ, ಅನೀಸ್ ಪಾಷಾ, ರಾಜೇಶ್ವರಿ, ಶ್ರೀನಿವಾಸ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.  ...  (ಬಾಕ್ಸ್)  ಅನ್ನಭಾಗ್ಯದಡಿ ಅಕ್ಕಿ ವಿತರಣೆ  ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಇನ್ನು ಮುಂದೆ ನಗದು ಬದಲಿಗೆ 5 ಕೆಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿಯಿಂದಲೇ ಜಾರಿಗೆ ಬಂದಿದೆ. ಮಾರ್ಚ್ ತಿಂಗಳಿನಲ್ಲಿ ಒಟ್ಟು 15 ಕೆಜಿ ಅಕ್ಕಿ ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನುಭವಿಗೆ ದೊರೆಯಲಿದೆ ಎಂದು ತಿಳಿಸಿದರು.  2023ರ ಜುಲೈನಿಂದ ಕಳೆದ ಡಿಸೆಂಬರ್ ಅಂತ್ಯದ ವರೆಗೆ 3,44,950 ಕಾರ್ಡ್‌ನ 12,42,812 ಸದಸ್ಯರಿಗೆ ಯೋಜನೆ ಆರಂಭವಾದಾಗಿನಿಂದ 346.33 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.  ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುತ್ತಿದ್ದು ಡಿಸೆಂಬರ್ ಅಂತ್ಯದ ವರೆಗೆ ನೋಂದಣಿಯಾದ 3,71,512 ಫಲಾನುಭವಿಗಳಿದ್ದು 3,59,601 ಮಹಿಳೆಯರಿಗೆ 1135.27 ಕೋಟಿ ಹಣ ಡಿಬಿಟಿ ಮೂಲಕ ಸಂದಾಯ ಮಾಡಲಾಗಿದೆ ಎಂದರು.  ಗೃಹಜ್ಯೋತಿ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಒಟ್ಟು 561066 ವಿದ್ಯುತ್ ಸಂಪರ್ಕ ಪಡೆದ ಆರ್.ಆರ್. ಸಂಖ್ಯೆಗಳಿದ್ದು ಇದರಲ್ಲಿ 498411 ಆರ್.ಆರ್. ಸಂಖ್ಯೆಯ ಫಲಾನುಭವಿಗಳು ಗೃಹಜ್ಯೋತಿಯಡಿ ನೊಂದಣಿಯಾಗಿವೆ. ಇದರ ವೆಚ್ಚವಾಗಿ ಫೆಬ್ರವರಿ ತಿಂಗಳಲ್ಲಿ 21.32 ಕೋಟಿ ರೂ. ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿಸಿದರು.  ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದ ವ್ಯಾಪ್ತಿಯಲ್ಲಿ 2023 ರ ಜೂನ್‌ನಿಂದ ಕಳೆದ ಫೆಬ್ರವರಿ ಅಂತ್ಯದವರೆಗೆ 7,61,20,815 ಟ್ರಿಪ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದು ಇದರ ವೆಚ್ಚವಾಗಿ 215 ಕೋಟಿ ರೂ.ಗಳನ್ನು ಸರ್ಕಾರದಿಂದ ಭರಿಸಲಾಗಿದೆ.  ಯುವನಿಧಿ ಯೋಜನೆಯಡಿ ಪದವಿ ಉತ್ತೀರ್ಣರಾದ ಹಾಗೂ ಡಿಪ್ಲೊಮಾ ಪಾಸಾದವರಿಗೆ ಶಿಷ್ಯವೇತನವಾಗಿ ಪ್ರತಿ ತಿಂಗಳು ಪದವೀಧರರಿಗೆ 3000 ಮತ್ತು ಡಿಪ್ಲೊಮಾ ಮಾಡಿದವರಿಗೆ 1500 ರೂ. ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2024ರ ಜನವರಿಯಿಂದ ಕಳೆದ ಫೆಬ್ರವರಿ ವರೆಗೆ 6458 ಪದವೀಧರರು ಹಾಗೂ 125 ಡಿಪ್ಲೊಮಾ ಪೂರೈಸಿದವರು ಸೇರಿ 6583 ಅಭ್ಯರ್ಥಿಗಳಿಗೆ 12.66 ಕೋಟಿ ರೂ.ಗಳನ್ನು ಶಿಷ್ಯವೇತನವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net