

ದಾವಣಗೆರೆ : ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಕೆವೈಸಿ, ಬಯೋಮೆಟ್ರಿಕ್ ಮೂಲಕ ಅವರ ಖಾತೆಗೆ ಹಣ ಜಮೆಯಾಗುವಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಹಸೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳು ಜಂಟಿಯಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕದ ವ್ಯತ್ಯಾಸ, ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಸಿಗುವಂತಾಗಬೇಕು. ಆದ್ದರಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಗಳ ಮಾಹಿತಿ ಕುರಿತು ಆಂದೋಲನ ಕೈಗೊಳ್ಳಬೇಕೆಂದು ತಿಳಿಸಿದರು. ಈ ಯೋಜನೆಗಳು ತಲುಪದೇ ಇರುವವರಿಗೆ ಅರಿವು ಮೂಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ನೀಡುವ ಸಮಯದ ವೇಳಾಪಟ್ಟಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ 2023 ರ ಜುಲೈನಿಂದ 2024 ರ ಜೂನ್ ವರೆಗೆ ಒಟ್ಟಾರೆ 341792 ಪಡಿತರ ಚೀಟಿದಾರರಿದ್ದು, ಅದರಲ್ಲಿ 1226537 ಫಲಾನುಭವಿಗಳು ಅನ್ಯಭಾಗ್ಯ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು, ಈ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯ ಹಣವನ್ನು ಡಿ.ಬಿ.ಟಿ. ಮೂಲಕ ಪ್ರತಿ ತಿಂಗಳು ಪಾವತಿಸಲಾಗಿದೆ. 2023 ರ ಜುಲೈ ನಿಂದ 2024 ರ ಜುಲೈ ವರೆಗೆ 247.28 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗೃಹಲಕ್ಷ್ಮೀ ಯೋಜನೆಯಡಿ ಎಲ್ಲ ತಾಲೂಕುಗಳಿಂದ 366937 ಫಲಾನುಭವಿಗಳು ನೋಂದಣಿಯಾಗಿದ್ದು ಇದರಲ್ಲಿ 358289 ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 2023 ರ ಆಗಸ್ಟ್ನಿಂದ ಕಳೆದ ಮಾರ್ಚ್ ವರೆಗೆ 751.38 ಕೋಟಿ ರೂ. ಡಿಬಿಟಿ ಮೂಲಕ ಮಹಿಳೆಯರಿಗೆ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ 5,02,97,487 ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿದ್ದು, ಪ್ರಯಾಣ ವೆಚ್ಚವಾಗಿ ಒಟ್ಟು ರೂ.136.65 ಕೋಟಿ ರೂ.ಗಳನ್ನು ಸರ್ಕಾರ ಭರಿಸುತ್ತಿದೆ ಎಂದು ತಿಳಿಸಿದರು. ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಕೆ.ಎನ್. ಮಂಜುನಾಥ, ನಂಜಾನಾಯ್ಕ, ಅನಿತಾಬಾಯಿ ಇದ್ದರು.