ಸಬಲೀಕರಣಕ್ಕೆ ದಾರಿ, ಆರ್ಥಿಕ ಬೆಳವಣಿಗೆಗೆ ಪೂರಕ

lakshmi.jpg
Published on

ದಾವಣಗೆರೆ : ಗೃಹಲಕ್ಷ್ಮೀ ಯೋಜನೆಯು ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಡುವ ಜತೆಗೆ ಒಟ್ಟಾರೆ ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಗೃಹಲಕ್ಷ್ಮೀ’ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಯೋಜನೆಯ ಹಣದಿಂದ ಕುಟುಂಬದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಇನ್ನಿತರ ಉದ್ದೇಶಗಳಿಗೆ ಅನುಕೂಲವಾಗುತ್ತದೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಜತೆಗೆ ಒಂದಿಲ್ಲ ಒಂದು ರೀತಿಯಲ್ಲಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
 ಸರ್ಕಾರ ಜಾರಿಗೊಳಿಸುತ್ತಿರುವ ಐದೂ ಗ್ಯಾರಂಟಿ ಯೋಜನೆಗಳು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತವೆ. ಇಂಥದೊಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ನನ್ನ ಪುಣ್ಯ. ರಾಜಕೀಯಕ್ಕೆ ಬಂದಿದ್ದಕ್ಕೂ ಸಾರ್ಥಕವಾದಂತಾಗಿದೆ. ಈ ಯೋಜನೆಯನ್ನು ಮಹಿಳೆಯರು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
 ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3.27 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ. ತಲಾ 2 ಸಾವಿರ ರೂ.ಗಳಂತೆ ಪ್ರತಿ ತಿಂಗಳು 65 ಕೋಟಿ ರೂ. ಫಲಾನುಭವಿಗಳ ಖಾತೆಗೆ ಸಾಯವಾಗಲಿದೆ ಎಂದರು.
 ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಮಾಡುವ ಟೀಕೆಗೆ ಕಿವಿಗೊಡಬೇಡಿ. ಚುನಾವಣೆಯಲ್ಲಿ ನೇರವಾಗಿ ಅವರಿಗೆ ಉತ್ತರ ನೀಡಬೇಕಿದೆ. ಇದೆಲ್ಲ ಮಹಿಳೆಯರ ಕೈಯಲ್ಲಿದೆ ಎಂದು ತಿಳಿಸಿದರು.
 2001 ರಲ್ಲಿ ತಾವು ಸಚಿವರಿದ್ದಾಗ 15 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಲಾಯಿತು. ಅದಾದ ಮೇಲೆ ಆಡಳಿತ ನಡೆಸಿದವರು ಒಂದು ಮನೆಯನ್ನೂ ಕಟ್ಟಿಲ್ಲ. ವಸತಿ, ಶಾಲೆ, ಆಸ್ಪತ್ರೆಯಂಥ ಮೂಲ ಅಗತ್ಯಗಳಿಗೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.
 ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಬರುವ ಹಣವನ್ನು ಬಡವರ ಸಾಲದ ಬಾಕಿಗೆ ಜಮಾ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಮಾಯಕೊಂಡ ಕ್ಷೇತ್ರ ಸೇರಿ ವಿವಿಧ ತಾಲೂಕುಗಳಲ್ಲಿ ಮೆಕ್ಕೆಜೋಳ ಬೆಳೆ ಮಳೆ ಕೊರತೆಯಿಂದ ಒಣಗುತ್ತಿದೆ. ಹೀಗಾಗಿ ದಾವಣಗೆರೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
 ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರಾದ ಎ. ನಾಗರಾಜ, ಚಮನ್‌ಸಾಬ್, ಆರ್. ಜಯಮ್ಮ, ಕಾಂಗ್ರೆಸ್ ಮುಖಂಡರಾದ ಬಸವರಾಜ ಶಾಮನೂರು, ಎನ್.ಜಿ. ಪುಟ್ಟಸ್ವಾಮಿ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ಇದ್ದರು. ಪಾಲಿಕೆ ಆಯುಕ್ತೆ ರೇಣುಕಾ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕ ಮಾತನಾಡಿದರು.
 ಫಲಾನಿಭವಿಗಳಾದ ಜೆ.ಎಂ. ಉಮಾ, ಜಿ.ಎಸ್. ಶ್ವೇತಾ, ಅನುಷಾ ಅನಿಸಿಕೆ ವ್ಯಕ್ತಪಡಿಸಿದರು.
 ...
 (ಕೊಟ್)
 ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3.27 ಲಕ್ಷ ಫಲಾನುಭವಿಗಳ ನೋಂದಣಿ ಮಾಡಲಾಗಿದ್ದು ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಿಳೆಯರ ಆರ್ಥಿಕ ಸಬಲೀಕರಣ, ಅಪೌಷ್ಟಿಕತೆ ನಿವಾರಣೆಗೆ ಈ ಯೋಜನೆ ಸಹಾಯಕವಾಗಿದೆ.
  ಡಾ.ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ
 ...
 
 (ಕೋಟ್)
 ಗೃಹಲಕ್ಷ್ಮೀ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಶೇ. 90ರಷ್ಟು ನೋಂದಣಿಯಾಗಿದೆ. ಇದರಿಂದ ಜನರಿಗೆ ಸಾರ್ವತ್ರಿಕ ಕನಿಷ್ಠ ಆದಾಯ ಸಿಗಲಿದೆ. ಶಿಕ್ಷಣ, ಔಷಧ ಸೇರಿ ಕುಟುಂಬದ ಒಳಿತಿಗೆ ಅನುಕೂಲವಾಗಲಿದೆ.
  ಸುರೇಶ ಇಟ್ನಾಳ್, ಜಿ.ಪಂ. ಸಿಇಒ
 ...
 
 (ಕೋಟ್)
 ಕುಟುಂಬದಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು. ಎಲ್ಲರ ಒಳಿತಿಗಾಗಿ ಮಹಿಳೆ ತ್ಯಾಗ ಮಾಡುತ್ತಾಳೆ. ಗೃಹಲಕ್ಷ್ಮೀ ಯೋಜನೆಯು ಆರ್ಥಿಕ ಸ್ವಾವಲಂಬನೆ ಕಲ್ಪಿಸಿ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.
  ಉಮಾ ಪ್ರಶಾಂತ್, ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net