ಕೊಪ್ಪದಲ್ಲಿ ವಿನಯ್‌ಕುಮಾರ್ ಗ್ರಾಮ ವಾಸ್ತವ್ಯ

DVG-VINAYKUMAR-12.jpg
Published on

ದಾವಣಗೆರೆ : ಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿರುವ ಇನ್ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್ ಅವರು ಗುರುವಾರ ಹರಿಹರ ತಾಲೂಕು ಹಾಲಿವಾಣ ಗ್ರಾ.ಪಂ.ವ್ಯಾಪ್ತಿಯ ಕೊಪ್ಪದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.
 ಸಂಜೆ ಗ್ರಾಮಕ್ಕೆ ಆಗಮಿಸಿದ ಜಿ.ಬಿ.ವಿನಯ್‌ಕುಮಾರ್ ಅವರಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರು. ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಿಂದ ಒಂದು ರೀತಿಯ ಕುತೂಹಲ ಹಾಗೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು.
 ಮೊದಲಿಗೆ ಗ್ರಾಮದ ದೇವಸ್ಥಾನದಲ್ಲಿ ದೇಶದ ಭಾವಿ ಪ್ರಜೆಗಳಾದ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿನಯಕುಮಾರ್ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಸಾಹಿತ್ಯ ಕೃತಿಗಳನ್ನು ವಿತರಿಸಿ ಎಲ್ಲರೂ ಪುಸ್ತಕಗಳನ್ನು ಓದಿ ಜ್ಞಾನ ಪಡೆದುಕೊಳ್ಳಬೇಕು. ಜ್ಞಾನ ಸಂಪಾದನೆಯಿಂದ ಜೀವನದಲ್ಲಿ ಧೈರ್ಯ ಬರುತ್ತದೆ ಎಂದು ಕಿವಿಮಾತು ಹೇಳಿದರು.
 ನಂತರ ಊರಿನ ಮುಖಂಡರೊಂದಿಗೆ ಸಂವಾದ ನಡೆಸಿದ ಅವರು ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಸಭಾ ಕಾರ್ಯಕ್ರಮವನ್ನೂ ನಡೆಸಲಾಯಿತು.
 ಗ್ರಾಮದ ಯಾದವ ಸಮಾಜದ ಕೆಂಚಮ್ಮ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ ವಿನಯ್‌ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಗ್ರಾಮ ಸೌಂದರ್ಯ ವೀಕ್ಷಣೆ ನಡೆಸಲಿದ್ದಾರಲ್ಲದೆ, ರೈತರು ಹಾಗೂ ಮಹಿಳೆಯರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಲಿದ್ದಾರೆ.
 ಮುಂದಿನ ದಿನಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿ ಕ್ಷೇತ್ರದ ಎರಡು ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮ ವಾಸ್ತವ್ಯ ಮಾಡಿ ವಿಜನ್ ಡಾಕ್ಯುಮೆಂಟ್ ತಯಾರಿಸುವ ಯೋಜನೆ ಹೊಂದಿರುವುದಾಗಿ ವಿನಯ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net